ಸೋಮವಾರಪೇಟೆ, ಡಿ. ೨೦: ಹವಾಮಾನ ವೈಪರೀತ್ಯದಿಂದಾಗಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸುರಿದ ಅಕಾಲಿಕ ಮಳೆಗೆ, ಸರಿಸುಮಾರು ೨೦೫ ಹೆಕ್ಟೇರ್‌ನಲ್ಲಿ ಕೈಗೊಳ್ಳಲಾಗಿದ್ದ ಭತ್ತದ ಫಸಲು ನಷ್ಟವಾಗಿದೆ. ಪ್ರಸಕ್ತ ವರ್ಷ ಕಾಫಿಯೂ ಸಹ ಅತಿವೃಷ್ಟಿಗೆ ನೆಲಕ್ಕಚ್ಚಿದ್ದು, ಬೆಳೆಗಾರ ವರ್ಗ ಮತ್ತೆ ಪರಿಹಾರಕ್ಕಾಗಿ ಸರ್ಕಾರದ ಬಾಗಿಲು ಬಡಿಯುವಂತಾಗಿದೆ.

ಭತ್ತ ಕಣಜವೆಂದೇ ಕರೆಸಿಕೊಳ್ಳುವ ಸೋಮವಾರಪೇಟೆ ತಾಲೂಕಿನಲ್ಲಿ ಭತ್ತ ಬೆಳೆಯುವ ರೈತರೇ ಕಾಫಿ ತೋಟವನ್ನು ಹೊಂದಿದ್ದಾರೆ. ಈ ಬಾರಿ ಕಾಫಿ ಮತ್ತು ಭತ್ತ ಫಸಲು ಹಾನಿಗೀಡಾಗಿರುವುದರಿಂದ ನಷ್ಟದ ಪ್ರಮಾಣ ಹೆಚ್ಚಿದೆ.

ತಾಲೂಕಿನಲ್ಲಿ ೧೧,೬೦೦ ಹೆಕ್ಟೇರ್ ಭತ್ತ ಬೆಳೆಯುವ ಭೂಮಿಯಿದ್ದು, ಅಕಾಲಿಕ ಮಳೆ, ಮುಂಗಾರು ವಿಳಂಬ ಸೇರಿದಂತೆ ಇನ್ನಿತರ ಕಾರಣಗಳಿಂದ ೨,೩೦೦ ಹೆಕ್ಟೇರ್‌ನಲ್ಲಿ ಭತ್ತ ಕೃಷಿ ಮಾಡುತ್ತಿಲ್ಲ. ಮಳೆಯಾಶ್ರಿತ ಮತ್ತು ಚಿಕ್ಲಿಹೊಳೆ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು ೯,೩೦೦ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ.

ಅಕ್ಟೋಬರ್‌ನಲ್ಲೂ ಅಕಾಲಿಕ ಮಳೆ ಸುರಿದಿತ್ತು. ಈಗ ಡಿಸೆಂಬರ್‌ನಲ್ಲೂ ಮಳೆ ಸುರಿಯುತ್ತಿದೆ. ಗದ್ದೆಗಳಲ್ಲಿ ಭತ್ತ ಹಣ್ಣಾಗಿದ್ದು ಶೀತಮಯ ವಾತಾವರಣದಿಂದಾಗಿ ಫಸಲು ಉದುರುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ಶೇ.೯೦ರಷ್ಟು ಕೊಯ್ಲು ಮುಗಿಯಬೇಕಿದೆ. ಈಗಾಗಲೇ ಗದ್ದೆಗಳಲ್ಲಿ ಕೊಯ್ಲು ಕಾರ್ಯ ಆರಂಭವಾಗಿದ್ದರೂ ನಿರೀಕ್ಷಿತ ಫಸಲು ಕೈ ಸೇರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

(ಮೊದಲ ಪುಟದಿಂದ) ಆಗಾಗ್ಗೆ ಮೋಡ ಮುಸುಕಿದ ವಾತಾವರಣ ಕಂಡುಬರುತ್ತಿರುವುದರಿAದ ಹಲವಷ್ಟು ಮಂದಿ ರೈತರು ಹಣ್ಣಾದ ಬೆಳೆಯನ್ನು ಕೊಯ್ಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವರು ಕೊಯ್ಲು ಮಾಡಿದ ಹಸಿ ಪೈರನ್ನೇ ಕಣಕ್ಕೆ ತಂದು ಶೇಖರಿಸಿಡುತ್ತಿದ್ದಾರೆ.

ಈ ಮಧ್ಯೆ ಕಾರ್ಮಿಕರ ಕೊರತೆಯೂ ರೈತರನ್ನು ಬಹುವಾಗಿ ಕಾಡುತ್ತಿದೆ. ಎಲ್ಲೆಡೆ ಕಾಫಿ ಕೊಯ್ಲು ಆರಂಭವಾಗಿರುವುದರಿAದ ಕಾರ್ಮಿಕರು ಕಾಫಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಬೆಳೆ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ.

ಪೈರನ್ನು ಕಟಾವು ಮಾಡಿ ಸಾಗಿಸಲು ಸಿದ್ಧತೆ ಮಾಡಿಕೊಂಡಿದ್ದ ಸಂದರ್ಭವೇ ಮಳೆಯ ಆಗಮನವಾಗಿದ್ದು, ವಿವಿಧ ಭಾಗಗಳಲ್ಲಿ ಕೇವಲ ಒಂದೂವರೆ ಗಂಟೆಯಲ್ಲಿ ೫ಇಂಚಿಗೂ ಹೆಚ್ಚು ಮಳೆ ಸುರಿದಿದೆ. ಇದರಿಂದಾಗಿ ಗದ್ದೆಯಲ್ಲಿದ್ದ ಭತ್ತದ ಪೈರು ಮಣ್ಣು ಪಾಲಾಗಿ ನಷ್ಟ ಸಂಭವಿಸಿದೆ. ಗಿಡದಲ್ಲಿದ್ದ ಕಾಫಿ ಹಣ್ಣು ನೆಲಕ್ಕಚ್ಚಿವೆ.

ಈಗಾಗಲೇ ಫಸಲು ನಷ್ಟದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಅನೇಕ ಮಂದಿಗೆ ಇಂದಿಗೂ ಪರಿಹಾರ ಹಣ ಲಭಿಸಿಲ್ಲ. ಈ ನಡುವೆ ಅಳಿದುಳಿದ ಕಾಫಿ, ಭತ್ತವೂ ಕೈತಪ್ಪಿದೆ. ಕನಿಷ್ಟ ಪಕ್ಷ ಕಾಫಿ ಮಂಡಳಿಯಿAದ ಬೆಳೆಗಾರರಿಗೆ ಉಪಯೋಗವಾಗುವಂತೆ ಡ್ರೈಯಿಂಗ್ ಯಾರ್ಡ್, ಗೋದಾಮು ನಿರ್ಮಿಸಲು ಕ್ರಮ ಕೈಗೊಂಡಿದ್ದರೆ ನಷ್ಟದಿಂದ ಪಾರಾಗಬಹುದಿತ್ತು ಎಂದು ಹರಗದ ರೈತರಾದ ಶರಣ್, ಸಿಂಗನಳ್ಳಿಯ ಮಾಚಯ್ಯ, ಗೌಡಳ್ಳಿಯ ಹೂವಯ್ಯ, ಕೂತಿ ಗ್ರಾಮದ ಕೆ.ಎನ್. ಸತೀಶ್ ಸೇರಿದಂತೆ ಇತರರು ಅಭಿಪ್ರಾಯಿಸಿದ್ದಾರೆ.

ಕಾಫಿ ವಹಿವಾಟಿನಿಂದ ಸರ್ಕಾರಕ್ಕೆ ಕೋಟ್ಯಂತರ ಆದಾಯ ಇದ್ದು, ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರಗಳು ಸ್ಪಂದಿಸಬೇಕು ಎಂದು ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ೨೮,೫೯೦ ಹೆಕ್ಟೇರ್‌ನಲ್ಲಿ ಕಾಫಿ ಉತ್ಪಾದನೆಯಾಗುತ್ತಿದ್ದು, ೨೨,೯೦೦ ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಹಾಗೂ ೫,೬೯೦ ಹೆಕ್ಟೇರ್‌ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಾಫಿ ಕೊಯ್ಲಿಗೆ ಬರುವುದು ವಾಡಿಕೆ. ಆದರೆ ಈ ವರ್ಷ ಅಕ್ಟೋಬರ್ ಪ್ರಾರಂಭದಿAದಲೇ ಕಾಫಿ ಹಣ್ಣಾಗಿ ಅಕಾಲಿಕ ಮಳೆಗೆ ಸಿಲುಕಿ ಮಣ್ಣುಪಾಲಾಗಿದೆ.

ಕಳೆದ ವರ್ಷ ಅರೇಬಿಕಾ ಪಾರ್ಚ್ಮೆಂಟ್ ೫೦ ಕೆ.ಜಿ. ತೂಕದ ಚೀಲಕ್ಕೆ ೧೫,೫೦೦ ರಿಂದ ೧೭ ಸಾವಿರ ರೂ. ಬೆಲೆ ಸಿಕ್ಕಿತ್ತು. ಪ್ರಸಕ್ತ ವರ್ಷ ೧೩,೭೦೦ ರೂ.ಗಳಿಗೆ ಇಳಿಕೆಯಾಗಿದೆ. ಇದರೊಂದಿಗೆ ಫಸಲು ಸಹ ಕಡಿಮೆಯಿದ್ದು, ಅನಿವಾರ್ಯವಾಗಿ ನಷ್ಟ ಅನುಭವಿಸುವ ಸ್ಥಿತಿಗೆ ಬೆಳೆಗಾರ ವರ್ಗ ಸಿಲುಕಿದೆ.