ಕಣಿವೆ, ಡಿ. ೨೦: ಕಳೆದ ಎರಡು ದಶಕಗಳಿಂದಲೂ ವಿಶ್ವ ವಿಖ್ಯಾತ ಮೈಸೂರು ಜಂಬೂ ಸವಾರಿಗೆ ತೆರಳುವ ಮೂಲಕ ಖ್ಯಾತನಾಗಿರುವ ದುಬಾರೆ ಸಾಕಾನೆ ಶಿಬಿರದ ‘ಹರ್ಷ’ ಸಂತಸದಲ್ಲಿ ಸಂಗಾತಿ ಹುಡುಕಿ ಹೋದವನು ಸಂಕಟಗೊAಡು ಶಿಬಿರಕ್ಕೆ ಮರಳಿದ ಘಟನೆ ನಡೆದಿದೆ.
ಅಂದಾಜು ೫೫ ರ ಪ್ರಾಯದ ಸಾಕಾನೆ ಹರ್ಷ ಕಳೆದ ವಾರದ ಹಿಂದೆ ದುಬಾರೆಯ ಸಾಕಾನೆ ಶಿಬಿರದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ವಯೋಸಹಜ ಆಕರ್ಷಣೆಯಿಂದಾಗಿ ಸಾಂಗತ್ಯ ಬಯಸಿ ರಾತ್ರೋರಾತ್ರಿ ಪರಾರಿಯಾಗಿದ್ದ ಎನ್ನಲಾಗಿದೆ. ಈತ ಶಿಬಿರದಿಂದ ನಾಪತ್ತೆಯಾದೊಡನೆ ಈತನ ಪತ್ತೆಗೆ ಬಲೆ ಬೀಸಿದ ಮಾವುತರು ಹಾಗೂ ಕಾವಾಡಿಗಳು ಹುಡುಕಿ ಹುಡುಕಿ ಬಳಲಿ ಬೇಸತ್ತು ಶಿಬಿರಕ್ಕೆ ಮರಳಿದ್ದರು.
ದುಬಾರೆಯಿಂದ ನೆರೆಯ ಪಿರಿಯಾಪಟ್ಟಣ ತಾಲೂಕಿಗೆ ಒಳಪಟ್ಟ ಕಾವೇರಿ ನದಿ ತೀರದ ಅರಣ್ಯದೊಳಗೆ ಸುತ್ತಾಡಿ ಬಳಲಿ ಬಸವಳಿದು ಆನೆಕಾಡು ಮೀಸಲು ಅರಣ್ಯದ ಕೆರೆಯೊಂದರಲ್ಲಿ ವಿಶ್ರಮಿಸುತ್ತಿದ್ದ. ಈ ನಡುವೆ ತನಗೆ ಎದುರಾದ ಕಾಡಿನೊಳಗಣ ಸಲಗವೋ ಮತ್ತೆ ಬೇರಾವುದೋ ಆನೆಯ ಜೊತೆ ಸಂಘರ್ಷಕ್ಕಿಳಿದು ತನ್ನ ಮುಂಬದಿಯ ಕಾಲನ್ನು ನೋವು ಮಾಡಿಕೊಂಡ ಈ ಹರ್ಷ ತನಗಾದ ಆ ನೋವನ್ನು ಸಹಿಸದೆಯೋ ಏನೋ ಆನೆಕಾಡಿನ ಕೆರೆಯೊಳಗಿನ ನೀರಲ್ಲಿ ಇದ್ದಾಗ ಮತ್ತೊಂದು ಸಾಕಾನೆಯ ಮಾವುತನ ಅನತಿಗೆ ಓಗೊಟ್ಟು ನೀರಿನಿಂದ ಕಾಲುತೆಗೆದು ಚಲನೆಗೊಳಪಟ್ಟ.
ಇದನ್ನು ಗಮನಿಸಿದ ಮಾವುತನಿಗೆ ಹರ್ಷನ ಕಾಲಿನಲ್ಲಿದ್ದ ತುಂಡರಿಸಿದ ಕಬ್ಬಿಣದ ಸರಪಳಿಯಿಂದಾಗಿ ತಪ್ಪಿಸಿಕೊಂಡಿದ್ದ ಹರ್ಷನ ಸುಳಿವು ದೊರಕಿತು. ನಂತರ ಹರ್ಷನನ್ನು ಆನೆಕಾಡಿನಿಂದ ದುಬಾರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ‘ಶಕ್ತಿ'ಗೆ ಪ್ರತಿಕ್ರಿಯಿಸಿದ ದುಬಾರೆ ಶಿಬಿರದ ಉಪವಲಯ ಅರಣ್ಯಾಧಿಕಾರಿ ರಂಜನ್, ಶಿಬಿರದ ಸಾಕಾನೆ ಹರ್ಷ ಸಹಜ ಆಕರ್ಷಣೆಯಿಂದಾಗಿ ಹೆಣ್ಣು ಸಂಗಾತಿ ಹುಡುಕಿ ಹೋಗಿದ್ದು ನಿಜ. ಇದೀಗ ಮತ್ತೆ ಶಿಬಿರಕ್ಕೆ ಆತನನ್ನು ಕರೆತಂದು ಚಿಕಿತ್ಸೆ ನೀಡಲಾಗಿದೆ. ಈಗಷ್ಟೆ ಶಿಬಿರದಿಂದ ನೀಡಿದ ಆತಿಥ್ಯ ಸ್ವೀಕರಿಸಿದ ಹರ್ಷ ಎಂದಿನAತೆ ಕಾಡಿಗೆ ತೆರಳಿದ್ದಾನೆ ಎಂದು ಹೇಳಿದರು.
(ವಿಶೇಷ ವರದಿ : ಕೆ.ಎಸ್.ಮೂರ್ತಿ )