ಮಡಿಕೇರಿ, ಡಿ. ೨೦: ಮೊಗೇರಾ ಸೇವಾ ಸಮಾಜ ಕೊಡಗು, ಮುದ್ದ ಕಳಲ ಯುವಕ ಸಂಘ ಮಡಿಕೇರಿ ಇವರ ವತಿಯಿಂದ ತಾ. ೩೦ ರಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೩ ಗಂಟೆವರೆಗೆ ನಗರದಲ್ಲಿ ನಿವೇಶನ ರಹಿತರ ಪ್ರತಿಭಟನೆ ನಡೆಯಲಿದೆ ಎಂದು ಮೊಗೇರಾ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ದಿನೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿರುವ ಮೊಗೇರ ಜನಾಂಗವು ಈ ನಾಡಿನ ಮೂಲ ನಿವಾಸಿಗಳಾಗಿದ್ದಾರೆ. ಸಮುದಾಯದ ಅನೇಕರು ಈಗ ಕೊಡಗಿನ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ತೋಟದ ಲೈನ್ಮನೆಗಳಲ್ಲಿ ನಿವೇಶನ ಹಾಗೂ ವಸತಿ ರಹಿತರಾಗಿ ಸರಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿ ಜೀವನ ಸಾಗಿಸುತ್ತಿದ್ದಾರೆ.
ದೇಶಕ್ಕೆ ಸ್ವಾತಂತ್ರö್ಯ ಬಂದು ೭೫ ವರ್ಷ ಕಳೆದರೂ, ಇನ್ನೂ ಕೂಡ ಸ್ವಂತ ಸೂರಿಲ್ಲದೆ ಕಾಫಿ ತೋಟದ ಲೈನ್ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸವಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಮೊಗೇರಾ ಸಮುದಾಯಕ್ಕೆ ಕೆಲವು ಕಡೆಗಳಲ್ಲಿ ಸತ್ತರೆ ಶವ ಸಂಸ್ಕಾರ ಮಾಡಲು ಜಾಗ ಕೊಡದೆ ದರ್ಪ ತೋರಿಸುವ ಮಾಲೀಕರೂ ಕೆಲವೆಡೆ ಇದ್ದಾರೆ ಎಂದು ಅವರುಗಳು ಆರೋಪಿಸಿದರು.
ಸರಕಾರಗಳು ಶೋಷಿತ ಸಮುದಾಯದ ಪರವಾಗಿ ನಿಲ್ಲದೆ, ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವವರಿಗೇ ಒತ್ತುವರಿ ಮಾಡಿಕೊಂಡಿದ್ದ ಸರಕಾರಿ ಜಮೀನನ್ನು ೩೦ ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಒಡೆತನಕ್ಕೆ ನೀಡಲು ಈಗಿನ ಕಂದಾಯ ಸಚಿವರು ತೀರ್ಮಾನಿಸಿರುವುದು ವಿಷಾದನೀಯ ಎಂದು ಹೇಳಿದರು.
ಒಂದಿAಚು ಭೂಮಿಯನ್ನು ಹೊಂದಿರದ ಶೋಷಿತ ಸಮುದಾಯಕ್ಕೆ ಮೊದಲು ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳಲು ಕನಿಷ್ಟ ಕುಟುಂಬಕ್ಕೆ ೧೦ ಸೆಂಟ್ ಜಾಗವನ್ನು ಕೊಡಬೇಕೆಂದು ಆಗ್ರಹಿಸಿ ತಾ. ೩೦ ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಸ್ಪಂದನ ಸಿಗದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಅವರುಗಳು ಎಚ್ಚರಿಕೆಯಿತ್ತರು. ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ರಾಮ ಉಪಸ್ಥಿತರಿದ್ದರು.