ಗೋಣಿಕೊಪ್ಪಲು, ಡಿ. ೨೦: ಕರ್ನಾಟಕ ಸರ್ಕಾರ ನಿರುದ್ಯೋಗಿ ಗಳಿಗೆ ಉದ್ಯೋಗ ಒದಗಿಸಲು ನಾನಾ ರೀತಿಯ ಕಾರ್ಯಕ್ರಮಗಳನ್ನು ಆಗಿಂದ್ದಾಗಿಯೇ ಆಯೋಜಿಸುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಭಾಗವಹಿಸುವ ಮೂಲಕ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯಬಹುದು ಎಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಕಿವಿಮಾತು ಹೇಳಿದರು.
ಗೋಣಿಕೊಪ್ಪಲುವಿನ ಕಾಲೇಜು ಆವರಣದ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಕಾವೇರಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ಸಿಗಲಿಲ್ಲ ಎಂಬ ಉದ್ದೇಶದಿಂದ ಯಾವುದೇ ವಿದ್ಯಾರ್ಥಿಗಳು ನಿರಾಶೆಗೊಳ್ಳದೆ ಖಿನ್ನತೆಗೆ ಒಳಗಾಗದೆ ಮತ್ತೊಮ್ಮೆ ಪ್ರಯತ್ನ ಮಾಡಬೇಕು. ಹಲವು ಸಂದರ್ಶನಗಳಲ್ಲಿ ಭಾಗವಹಿಸುವ ಮೂಲಕ ವಿವಿಧ ಅನುಭವಗಳು ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ. ಸರ್ಕಾರ ಉದ್ಯೋಗ ನೀಡಲು ವಿವಿಧ ಹಂತದಲ್ಲಿ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರತಿಯೊಬ್ಬರಿಗೂ ಉದ್ಯೋಗ ಅವಕಾಶ ದೊರೆಯಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರತಿ ಗ್ರಾಮ ಮಟ್ಟದಲ್ಲಿ ಉದ್ಯೋಗ ವಂಚಿತ ಯುವಕ-ಯುವತಿಯರನ್ನು ಗುರುತಿಸಿ ಅವರಿಗೆ ಸ್ವ ಉದ್ಯೋಗ ನೀಡಲು ಇಲಾಖೆ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇಲಾಖೆಯ ಮೂಲಕ ಆರ್ಥಿಕ ವ್ಯವಸ್ಥೆ ಕಲ್ಪಿಸಲಾ ಗುತ್ತದೆ. ಇದರ ಪ್ರಯೋಜನವು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಮೂಲಕ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅವಕಾಶ ಲಭಿಸಲಿದೆ ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಿ. ಅರ್ಚನಾಭಟ್, ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಇಟ್ಟಿರ ಬಿದ್ದಪ್ಪ ಮಾತನಾಡಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಎಂ. ಉಮಾ ಮಾತನಾಡಿ, ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಉದ್ಯೋಗ ಮೇಳವು ಹಮ್ಮಿಕೊಳ್ಳ ಲಾಗಿದೆ. ೨೦ಕ್ಕೂ ಅಧಿಕ ವಿವಿಧ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿವೆ. ವಿವಿಧ ಪ್ರದೇಶದಿಂದ ೨೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಲಭಿಸಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಎಂ.ಬಿ ಕಾವೇರಪ್ಪ, ಜಿಲ್ಲಾ ಕೌಶಲ್ಯಾಭಿವೃದ್ಧಿ ಸಹಾಯಕ ನಿರ್ದೇಶಕಿ ರೇಖಾ ಗಣಪತಿ, ಕಾಲೇಜಿನ ಉಪ ಪ್ರಾಂಶುಪಾಲೆ ಎ.ಎಸ್. ಪೂವಮ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿ ಅನ್ವಿತ್ ಕುಮಾರ್ ಪ್ರಾರ್ಥಿಸಿ, ಶಿಕ್ಷಕಿ ಎಸ್.ಎಂ. ರಜನಿ, ಅಂಕಿತ ನಿರೂಪಿಸಿ ಉಪನ್ಯಾಸಕ ಯು.ಟಿ. ಪೆಮ್ಮಯ್ಯ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮ ದಲ್ಲಿ ಕಾಲೇಜಿನ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.