ಮಡಿಕೇರಿ, ಡಿ. ೧೮: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಕಾರ್ಯಕಾರಿ ಸಮಿತಿಯ ತಾಲೂಕು ಅಧ್ಯಕ್ಷರು, ಹೋಬಳಿ ಅಧ್ಯಕ್ಷರು ಮತ್ತು ವಿಶೇಷ ಆಹ್ವಾನಿತರ ಪೂರ್ಣ ಪ್ರಮಾಣದ ಸಭೆಯು ಕೊಡಗು ಪತ್ರಿಕಾ ಭವನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ತಾಲೂಕು ಸಮ್ಮೇಳನ ಮತ್ತು ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ಜಿಲ್ಲಾ ಸಮ್ಮೇಳನ ನಡೆಸುವಂತೆ ತೀರ್ಮಾನಿಸಲಾಯಿತು.
ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಡಗು ಜಿಲ್ಲೆಯಿಂದ ೨೫೦ ಮಂದಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನು ನೋಂದಾಯಿಸಿ ಸಮ್ಮೇಳನದಲ್ಲಿ ಭಾಗಿಯಾಗುವಂತೆ ಮಾಡುವ ಬಗ್ಗೆ ದೀರ್ಘ ಚರ್ಚೆ ನಡೆದು ಪ್ರತಿ ತಾಲ್ಲೂಕು ಅಧ್ಯಕ್ಷರಿಗೆ ಮತ್ತು ಹೋಬಳಿಯ ಅಧ್ಯಕ್ಷರಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ಸದಸ್ಯರನ್ನು ನೋಂದಾಯಿಸಿ ಕೊಳ್ಳುವಂತೆ ತೀರ್ಮಾನಿಸಲಾಯಿತು.
ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಭವನ ಕಟ್ಟುವ ನಿಟ್ಟಿನಲ್ಲಿ ಈಗಾಗಲೇ ಸಮಿತಿ ರಚನೆ ತಯಾರಿ ನಡೆದಿದ್ದು, ನಕ್ಷೆ ಮತ್ತು ಅಂದಾಜು ಪಟ್ಟಿ ತಯಾರಿಸುವ ಕಾರ್ಯ ಪ್ರಾರಂಭವಾಗಿದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು. ತಾಲೂಕು ಅಧ್ಯಕ್ಷರುಗಳು ಮತ್ತು ಹೋಬಳಿ ಅಧ್ಯಕ್ಷರುಗಳು ತಮ್ಮ ಕ್ಷೇತ್ರದಲ್ಲಿ ನಡೆಸಿದ ಕಾರ್ಯಕ್ರಮಗಳ ಮತ್ತು ರಾಜ್ಯೋತ್ಸವ ಆಚರಣೆ ನಡೆಸಿದ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ೨೦೨೧ ೨೨ ನೇ ಸಾಲಿನ ೨೧ ದತ್ತಿ ನಿಧಿ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ನಡೆದಿದ್ದು ೨೨ - ೨೩ನೇ ಸಾಲಿನ ೨೭ ಪ್ರತಿನಿಧಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ ಸಮ್ಮೇಳನಗಳನ್ನು ಆಯೋಜಿಸುವ ಸಂದರ್ಭದಲ್ಲಿ ಕ್ಷೇತ್ರದ ಶಾಸಕರನ್ನು ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ವಾಹನ ಚಾಲಕರುಗಳ ಸಂಘದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರನ್ನು ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಅಂಗನವಾಡಿ, ಯುವಕ ಮಂಡಳಿ, ಯುವತಿ ಮಂಡಳಿ ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಂಡು ಸಮ್ಮೇಳನವನ್ನು ನಡೆಸಬೇಕು ಎಂದರು.
ತಾಲೂಕು ಜಿಲ್ಲಾ ಸಮ್ಮೇಳನಗಳು ದತಿನಿಧಿ ಕಾರ್ಯಕ್ರಮಗಳು ಸದಸ್ಯತ್ವ ಆಂದೋಲನ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಕುರಿತು ನೂತನ ಪ್ರತಿನಿಧಿ ಸ್ಥಾಪಿಸುವ ಕುರಿತು ನಡೆದ ಚರ್ಚೆಯಲ್ಲಿ ಎಲ್ಲಾ ಸದಸ್ಯರುಗಳು ಅಭಿಪ್ರಾಯ ಮಂಡಿಸಿದರು
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ನೂತನ ವಾಗಿ ಆಯ್ಕೆಯಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಇ. ಮೋಹಿದ್ದೀನ್, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಇದ್ದರು. ತಾಲೂಕು ಅಧ್ಯಕ್ಷರುಗಳಾದ ಅಂಬೆಕಲ್ ನವೀನ್, ಕೆ.ಎಸ್. ಮೂರ್ತಿ, ರಾಜೇಶ್ ಪದ್ಮನಾಭ, ಕೋಳೆರ ದಯಾ ಚಂಗಪ್ಪ ಮತ್ತು ಹೋಬಳಿ ಅಧ್ಯಕ್ಷರುಗಳಾದ ಕುಲ್ಲಚಂಡ ಪ್ರಮೋದ್ ಗಣಪತಿ, ಬಾನಂಗಡ ಅರುಣ, ನಂಗಾರು ಕೀರ್ತಿ ಪ್ರಸಾದ್, ಬಿ.ಬಿ. ನಾಗರಾಜ ಆಚಾರ್, ಸುನಿಲ್ ಜೆ. ಪತ್ರಾವೋ, ಎಂ.ಎನ್. ಮೂರ್ತಿ, ಗೋಪಾಲ್ ಪರಾಜೆ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿಯ ನೂತನ ಪದನಿಮಿತ ಸದಸ್ಯರಾದ ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕ ರಾದ ಪುಟ್ಟರಾಜು, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಪೊನ್ನಚನ ಶ್ರೀನಿವಾಸ್, ಜಿಲ್ಲಾ ನಿರ್ದೇಶಕರಾದ ಮ.ನಾ. ವೆಂಕಟನಾಯಕ್, ಎಚ್.ಎಸ್. ಪ್ರೇಮ್‌ಕುಮಾರ್, ರಮ್ಯಾ ಮೂರ್ನಾಡು, ವಿಶೇಷ ಆಹ್ವಾನಿತರುಗಳಾದ ಮಲ್ಲಂಡ ಮಧುದೇವಯ್ಯ, ಟಿ.ಜೆ. ಪ್ರೇಮ್ ಕುಮಾರ್, ಎ.ವಿ. ಮಂಜುನಾಥ್, ಶ್ರೀಧರ ಹೂವಲ್ಲಿ, ಕೆ.ಎಂ. ಶ್ವೇತಾ, ಬಿ.ಎಂ. ಧನಂಜಯ, ಸಂಜೀವ್ ಜೋಶಿ ಉಪಸ್ಥಿತರಿದ್ದರು.