ಗೋಣಿಕೊಪ್ಪಲು, ಡಿ. ೧೭: ಸರ್ಕಾರ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇನ್ನೂ ಕೂಡ ಹಕ್ಕುಪತ್ರ ಲಭಿಸಿಲ್ಲ. ಅರಣ್ಯದಂಚಿನಲ್ಲಿ ಆನೆ ಕಂದಕಗಳನ್ನು ಅರಣ್ಯ ಇಲಾಖೆಯು ದುರಸ್ತಿಪಡಿಸಿಲ್ಲ. ತಿತಿಮತಿ ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಮೂರು ಪ್ರಮುಖ ಸ್ಥಳದಲ್ಲಿ ಸರ್ಕಾರಿ ಬಸ್‌ಗಳ ನಿಲುಗಡೆಗೆ ತೀರ್ಮಾನ ಕೈಗೊಳ್ಳಬೇಕು. ಹಾಡಿಯ ಜನರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸಿಕೊಡುವಂತೆ ತಿತಿಮತಿ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ರವರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳಲ್ಲೊಂದಾದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಮುಂದೆ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು. ಸಭೆಗೆ ಆಗಮಿಸಿದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಪ್ರತಿ ಪ್ರಶ್ನೆಗಳಿಗೆ ಖುದ್ದಾಗಿ ಹಾಗೂ ಇಲಾಖಾ ಅಧಿಕಾರಿಗಳ ಮುಖೇನ ಉತ್ತರಿಸಿದರು. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

ಪ್ರಮುಖವಾಗಿ ಸುತ್ತಮುತ್ತಲಿನ ಹಾಡಿಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸವಲತ್ತುಗಳನ್ನು ನೀಡಬೇಕೆಂಬ ನಿಯಮವಿದ್ದರೂ ಇಲ್ಲಿಯ ತನಕ ಬಹುತೇಕ ಹಾಡಿಗಳು ವಿದ್ಯುತ್, ರಸ್ತೆಯಿಂದ ವಂಚಿತರಾಗಿ ದ್ದಾರೆ. ಅರಣ್ಯ ಇಲಾಖೆಯ ಧೋರಣೆಯಿಂದ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗುತ್ತಿಲ್ಲ. ಮನೆ ನಿರ್ಮಾಣಕ್ಕೆ

(ಮೊದಲ ಪುಟದಿಂದ) ಅವಕಾಶವಿದ್ದರೂ ತೊಂದರೆಗಳು ಎದುರಾಗುತ್ತಿವೆ.

ಹೀಗಾಗಿ ಮನೆ ನಿರ್ಮಾಣದ ಜವಾಬ್ದಾರಿಯನ್ನು ಆಯಾಯಾ ಫಲಾನುಭವಿಗೆ ನೀಡಬೇಕು. ಮನೆ ನಿರ್ಮಾಣಕ್ಕೆ ಮಂಜೂರಾದ ಹಣವನ್ನು ಫಲಾನುಭವಿಗೆ ನೀಡಿದಲ್ಲಿ ನಾವುಗಳೇ ಮನೆಯನ್ನು ಕಟ್ಟಿಕೊಳ್ಳುತ್ತೇವೆ ಎಂದು ಗ್ರಾಮದ ಹಿರಿಯರಾದ ಆದಿವಾಸಿ ಮುಖಂಡ ಪಿ.ಎಂ.ಚುಬ್ರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಅರಣ್ಯಕ್ಕೆ ಬೆಂಕಿ ಬಿದ್ದ ವೇಳೆ ಆದಿವಾಸಿಗಳು ಇದನ್ನು ನಂದಿಸಬೇಕೆ ಹೊರತು ಅರಣ್ಯ ಇಲಾಖೆಯ ಅಧಿಕಾರಿಗಳು ನಂದಿಸಲು ಬರುವುದಿಲ್ಲ. ಹೀಗಾಗಿ ನಮ್ಮ ಮನೆ ನಿರ್ಮಾಣವನ್ನು ನಾವೇ ಮಾಡಿಕೊಳ್ಳುತ್ತೇವೆ. ಅರಣ್ಯ ಇಲಾಖೆಯು ಅಡ್ಡಿ ಪಡಿಸಿದಾಗ ಅದಕ್ಕೆ ನಾವೇ ಉತ್ತರ ನೀಡುತ್ತೇವೆ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಇವರ ಮಾತನ್ನು ಆಲಿಸಿದ ಜಿಲ್ಲಾಧಿಕಾರಿ ಮನೆ ನಿರ್ಮಾಣಕ್ಕೆ ಇಲಾಖೆ ವತಿಯಿಂದ ಮಂಜೂರಾ ಗುವ ಹಣವನ್ನು ಹಂತ ಹಂತವಾಗಿ ಫಲಾನುಭವಿಗೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ, ಮನೆ ನಿರ್ಮಾಣ ಜವಾಬ್ದಾರಿ ಫಲಾನುಭವಿ ಗಳದ್ದಾಗಿರು ತ್ತದೆ ಎಂದು ಭರವಸೆ ನೀಡಿದರು.

ಆನೆ ಹಾವಳಿಯನ್ನು ತಡೆಗಟ್ಟಲು ತಿತಿಮತಿ, ಜಂಗಲ್‌ಹಾಡಿ ಭಾಗದಲ್ಲಿ ಶೇಖರಣೆ ಮಾಡಲಾಗಿದ್ದ ರೈಲ್ವೆ ಕಂಬಿಗಳನ್ನು ಇಲ್ಲಿಂದ ಸ್ಥಳಾಂತರ ಮಾಡಲಾಗಿದೆ. ತಿತಿಮತಿಯಲ್ಲಿರುವ ಪಶು ವೈದ್ಯ ಆಸ್ಪತ್ರೆಗೆ ವೈದ್ಯರು ಆಗಮಿಸುತ್ತಿಲ್ಲ. ಗೋಣಿಕೊಪ್ಪದಿಂದ ತಿತಿಮತಿಗೆ ಬರುವ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಎದುರಾಗುತ್ತಿದೆ. ತಿತಿಮತಿ - ಬಾಳೆಲೆಗೆ ಹೋಗುವ ರಸ್ತೆಯಲ್ಲಿ ದಟ್ಟವಾದ ಕಾಡು ಬೆಳೆದು ನಿಂತಿದೆ. ಮಂಗಗಳ ಹಾಗೂ ಕಾಡು ಹಂದಿಗಳ ಉಪಟಳ ಸೇರಿದಂತೆ ಇನ್ನಿತರ ವಿಚಾರದ ಬಗ್ಗೆ ರೈತ ಸಂಘದ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ ಜಿಲ್ಲಾಧಿಕಾರಿಗಳ ಗಮನ ಸೆಳೆದು ಈ ಬಗ್ಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ರೈತರು ಕೇಳಿದ ಪ್ರಶ್ನೆಗಳಿಗೆ ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳು ಉತ್ತರಿಸಿ ರೈಲ್ವೆ ಕಂಬಿಗಳನ್ನು ಮಡಿಕೇರಿಯಲ್ಲಿ ಕೈಗೊಂಡಿರುವ ಕಾಮಗಾರಿಗೆ ಬಳಸಲು ಇಲ್ಲಿಂದ ತೆಗೆದುಕೊಳ್ಳಲಾಗಿದೆ. ಈ ಭಾಗದಲ್ಲಿ ಕೆಲಸ ಪ್ರಾರಂಭವಾಗುವ ಸಂದರ್ಭ ರೈಲ್ವೆ ಕಂಬಿಗಳನ್ನು ತರಲಾಗುವುದು ಎಂದರು. ಬಾಳೆಲೆಯಲ್ಲಿ ನೂತನ ವಿದ್ಯುತ್ ಘಟಕವು ಪ್ರಾರಂಭವಾಗಲು ಹಲವು ಸಮಯ ಹಿಡಿಯಲಿದ್ದು, ಈ ಘಟಕವು ಆರಂಭದ ನಂತರ ತಿತಿಮತಿ ಭಾಗದ ವಿದ್ಯುತ್ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದು ಸೆಸ್ಕ್ ಇಂಜಿನಿಯರ್ ವಿಶ್ವಾಸ ವ್ಯಕ್ತಪಡಿಸಿದರು.

ಪಶು ವೈದ್ಯ ಇಲಾಖೆಯಲ್ಲಿ ವೈದ್ಯರುಗಳ ಕೊರತೆ ಹೆಚ್ಚಾಗಿದೆ. ಇರುವ ವೈದ್ಯರು ಮೂರು ಆಸ್ಪತ್ರೆಗಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಿತಿಮತಿ ಪಶುವೈದ್ಯ ಆಸ್ಪತ್ರೆಗೆ ಬಾಳೆಲೆ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರನ್ನು ವಾರದ ಎರಡು ದಿನ ಕಳುಹಿಸಿ ಕೊಡಲು ಕ್ರಮ ಕೈಗೊಳ್ಳಲಾಗುತ್ತದೆ. ಪ್ರಸ್ತುತ ಪರಿಸ್ಥಿತಿಯನ್ನು ರೈತರು ಅರಿತುಕೊಂಡು ಇಲಾಖೆಯೊಂದಿಗೆ ಸಹಕರಿಸುವಂತೆ ಅಧಿಕಾರಿ ಮನವಿ ಮಾಡಿದರು.

ರಾಜ್ಯ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿರುವುದ ರಿಂದ ಆಯ್ದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಹಾಗೂ ರಸ್ತೆ ಉಬ್ಬುಗಳನ್ನು ಅಳವಡಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇವರ ಮಾತಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಮುಂದಿನ ಚುನಾವಣೆ ಸಂದರ್ಭ ಗಡಿ ಭಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಅವಕಾಶ ಲಭ್ಯವಾಗಲಿದೆ. ಈ ವೇಳೆ ಈ ಭಾಗದಲ್ಲಿ ಸಿಸಿ ಕ್ಯಾಮೆರಾವನ್ನು ಖಾಯಂ ಆಗಿ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ. ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಯ್ದ ಕಡೆಗಳಲ್ಲಿ ರಸ್ತೆಗೆ ಹಸಿರು ಬಣ್ಣವನ್ನು ಬಳಿಯಲು ಕ್ರಮ ಕೈಗೊಳ್ಳಲಾಗುತ್ತದೆ. ಹಲವು ಸ್ಥಳಗಳಲ್ಲಿ ನಿಧಾನವಾಗಿ ಚಲಿಸಿ ಎಂಬ ನಾಮಫಲಕಗಳನ್ನು ಅಳವಡಿಸಲು ಸೂಚನೆ ನೀಡಲಾಗುವುದು ಎಂದರು.

ಸರ್ಕಾರದ ವತಿಯಿಂದ ಹೀಗಾಗಲೇ ೫೦೦ ಎಕರೆಗೂ ಅಧಿಕ ಸ್ಥಳವನ್ನು ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದೆ. ಈ ಜಾಗದಲ್ಲಿ ಆಸ್ಪತ್ರೆ, ಅಂಗನವಾಡಿ, ಶಾಲೆ ಸೇರಿದಂತೆ ಇನ್ನಿತರ ಸಮುದಾಯದ ಹಕ್ಕುಗಳನ್ನು ಒದಗಿಸಿದ ನಂತರ ಉಳಿದ ಸ್ಥಳದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಸತಿ ರಹಿತರಿಗೆ ಜಿಲ್ಲಾಧಿಕಾರಿ ಸತೀಶ್ ಉತ್ತರಿಸಿದರು.

ಆರ್‌ಟಿಸಿಯಲ್ಲಿನ ಗೊಂದಲ, ಪೌತಿಖಾತೆ ಸೇರಿದಂತೆ ಇನ್ನಿತರ ಕಡತಗಳು ಸರಿಪಡಿಸಿಲ್ಲ ಎಂದು ಜಿಲ್ಲಾಧಿಕಾರಿಗಳ ಮುಂದೆ ಕೆಲವರು ನೋವನ್ನು ತೋಡಿಕೊಂಡರು. ಈ ವೇಳೆ ವೇದಿಕೆಯಲ್ಲಿದ್ದ ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಅನೂಪ್‌ಕುಮಾರ್ ಮಾತನಾಡಿ, ಈ ಭಾಗದಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿದ್ದು ನೌಕರರನ್ನು ಹೆಚ್ಚಾಗಿ ನಿಯೋಜಿಸುವಂತೆ ಜಿಲ್ಲಾಧಿಕಾರಿ ಯನ್ನು ಕೋರಿದರು. ಇವರ ಮಾತಿಗೆ ಉತ್ತರಿಸಿದ ಸೆಸ್ಕ್ ಅಧಿಕಾರಿ ಇಲಾಖೆ ವತಿಯಿಂದ ಹಲವು ಸಿಬ್ಬಂದಿಗಳನ್ನು ನೇಮಕಾತಿ ಮಾಡಲಾಗಿದೆ. ಇವರನ್ನು ಈ ಭಾಗಕ್ಕೆ ನೇಮಕಗೊಳಿಸಲು ಹಿರಿಯ ಅಧಿಕಾರಿಗಳ ಗಮನ ಸೆಳೆಯುವುದಾಗಿ ತಿಳಿಸಿದರು.

ಹೂಗುಚ್ಚ ನಿರಾಕರಣೆ

ಜಿಲ್ಲಾಧಿಕಾರಿಗಳು ಸಭೆಗೆ ಆಗಮಿಸಿದ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆಡಳಿತ ಮಂಡಳಿಯ ಪರವಾಗಿ ಜಿಲ್ಲಾಧಿಕಾರಿಗಳಿಗೆ ಹೂಗುಚ್ಚವನ್ನು ನೀಡಿ ಸ್ವಾಗತಿಸಲು ಮುಂದಾದರು. ಈ ವೇಳೆ ಜಿಲ್ಲಾಧಿಕಾರಿಗಳು ಹೂಗುಚ್ಚವನ್ನು ತಿರಸ್ಕರಿಸಿ ಸರ್ಕಾರಿ ಕಾರ್ಯಕ್ರಮದಲ್ಲಿ ಹೂಗುಚ್ಚ ನೀಡದಂತೆ ನಿರ್ದೇಶನ ನೀಡಿದರು. ಈ ಪ್ರಸಂಗವನ್ನು ವಿವಿಧ ಅಧಿಕಾರಿಗಳು, ತದೇಕಚಿತ್ತದಿಂದ ಗಮನಿಸಿದರು.

ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಜಿಲ್ಲಾಮಟ್ಟದ ಅಧಿಕಾರಿಗಳಾದ ಶ್ರೀನಿವಾಸ್, ಶಭನಾ ಸೇರಿದಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಸಮಾಜ ಕಲ್ಯಾಣಾಧಿಕಾರಿ ಪ್ರೀತಿ ಚಿಕ್ಕಮಾದು, ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಪೊನ್ನಂಪೇಟೆ ಕಂದಾಯ ಇಲಾಖೆಯ ಅಧಿಕಾರಿ ಸುಧೀಂದ್ರ ಗ್ರಾಮ ಪಂಚಾಯಿತಿಯ ಸದಸ್ಯರುಗಳು ವಿವಿಧ ಭಾಗದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಉಪತಹಶೀಲ್ದಾರ್‌ಗಳು ಗ್ರಾಮ ಪಂಚಾಯಿತಿ ಪಿಡಿಓ ಮತ್ತಿತರರು ಪಾಲ್ಗೊಂಡಿದ್ದರು.

ವೀರಾಜಪೇಟೆ ತಾಲೂಕು ಹಿರಿಯ ಸರ್ವೆ ಅಧಿಕಾರಿ ಬಾನಂಗಡ ಅರುಣ್ ಸ್ವಾಗತಿಸಿ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ನಾಡ ಗೀತೆ ಹಾಡಿದರು. ಕಾರ್ಯಕ್ರಮದ ನೆನಪಿಗೆ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿಗಳು ಗಿಡಗಳನ್ನು ನೆಟ್ಟರು. ವಿವಿಧ ಇಲಾಖೆಯ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಯ ಪಡಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

ಅAಗನವಾಡಿ ಕಾರ್ಯಕರ್ತರು ಕಳಸದೊಂದಿಗೆ, ಶಾಲಾ ವಿದ್ಯಾರ್ಥಿ ಗಳು ಬ್ಯಾಂಡ್‌ಸೆಟ್‌ನೊAದಿಗೆ ಜಿಲ್ಲಾಧಿಕಾರಿಗಳನ್ನು ಮುಖ್ಯ ರಸ್ತೆಯಿಂದ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಬರಮಾಡಿಕೊಂಡರು. ಇವರೊಂದಿಗೆ ಇತರ ಅಧಿಕಾರಿಗಳು ಆಗಮಿಸಿದರು. ವಿವಿಧ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ವಿವಿಧ ವೇತನಗಳ ದೃಢೀಕರಣ ಪತ್ರ ವಿತರಿಸಿದರು.

-ಹೆಚ್.ಕೆ. ಜಗದೀಶ್