ಗೋಣಿಕೊಪ್ಪ ವರದಿ, ಡಿ. ೧೬: ಓದಿನ ಜತೆ ಅನ್ವೇಷಣೆಗೂ ಅವಕಾಶ ಮಾಡಿಕೊಡಬೇಕು ಎಂದು ಲಯನ್ಸ್ ಕ್ಲಬ್ ಮಲ್ಟಿಪ್ಲ್ ಕೌನ್ಸಿಲ್ ಮುಖ್ಯಸ್ಥ ವಸಂತ ಕುಮಾರ್ ಶೆಟ್ಟಿ ಸಲಹೆ ನೀಡಿದರು.

ಗೋಣಿಕೊಪ್ಪ ಲಯನ್ಸ್ ಇನ್ಟಿಟ್ಯೂಟ್ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಕ್ಕಳಿಗೆ ಓದಿನ ಜತೆಯಲ್ಲಿ ಅನ್ವೇಷಣೆಗೂ ಅವಕಾಶ ಮಾಡಿಕೊಡಬೇಕು. ಮುಕ್ತವಾಗಿ ಅವಕಾಶ ನೀಡಿದಾಗ ಸಾಕಷ್ಟು ಚಿಂತನೆಗಳು ಕನಸಿನ ಮೂಲಕ ಹೊರ ಬರುತ್ತದೆ. ಇದನ್ನೆ ದೇಶ ನಿರೀಕ್ಷಿಸುತ್ತಿದೆ.

ಸಾಮಾಜಿಕ ಜಾಲತಾಣ ಇಂದು ಶಿಕ್ಷಣ ನೀಡುತ್ತಿಲ್ಲ ಎಂಬ ಅರಿವು ಮಕ್ಕಳಲ್ಲಿ ಮೂಡಿಸಬೇಕು. ಈ ಬಗ್ಗೆ ಪಾಲಕರು ಜಾಗೃತರಾಗಬೇಕಿದೆ ಎಂದರು.

ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಚಿಯಕ್‌ಪೂವಂಡ ಬಿ. ಲತಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎ.ಬಿ. ಅಕ್ಕಮ್ಮ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ನಾಮೇರ ತಂಗಮ್ಮ ಶೈಕ್ಷಣಿಕ ಮತ್ತು ಕ್ರೀಡಾ ವರದಿ ವಾಚಿಸಿದರು. ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ನೃತ್ಯ, ಹಾಡುಗಾರಿಕೆ, ಕಲೆ ಮೂಲಕ ಗಮನ ಸೆಳೆದರು. ಕೊಡಗಿನಲ್ಲಿ ಮರೆಯಾಗುತ್ತಿರುವ ಕೃಷಿ ಮೂಲದ ಹಬ್ಬಗಳ ಆಚರಣೆ ಬಗ್ಗೆ ವಿದ್ಯಾರ್ಥಿಗಳು ನಾಟಕದ ಮೂಲಕ ಜಾಗೃತಿ ಮೂಡಿಸಿದರು. ಹಬ್ಬ ಆಚರಣೆಯಿಂದ ಕೃಷಿ ಉಳಿಸಿಕೊಳ್ಳಬಹುದು ಎಂಬ ಸಂದೇಶ ಸಾರಿದರು.

ಲಯನ್ಸ್ ಟ್ರಸ್ಟ್ ಮುಖ್ಯಸ್ಥ ಪಾರುವಂಗಡ ಎನ್. ಪೆಮ್ಮಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಮ್ಮಂಡ ಎ. ಚಿಣ್ಣಪ್ಪ, ವಿದ್ಯಾರ್ಥಿ ನಾಯಕರಾದ ಭುವಿ ಪೂವಮ್ಮ, ವಿಪುಲ್ ಪೊನ್ನಪ್ಪ, ಡೆರಿನ್ ಬ್ರೋನ್ ಸೈಮನ್ ಇದ್ದರು.