*ಗೋಣಿಕೊಪ್ಪ, ಡಿ. ೧೫: ಪುಟಾಣಿಗಳ ಲವಲವಿಕೆಯ ಕಲಿಕೆಯ ಚೇತರಿಕೆಗೆ ಆರು ಹೊಸ ಅಂಗನವಾಡಿ ಕಟ್ಟಡಗಳ ಕಾರ್ಯಾರಂಭಕ್ಕೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು.
ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗ್ಗರಿಕಾಡು ಕಾಲೋನಿಯಲ್ಲಿ ಅಂಗನವಾಡಿ ಪ್ರಾರಂಭಕ್ಕೆ ಶುಭ ಹಾರೈಸಿ ಮಾತನಾಡಿದರು.
ಪ್ರಾಥಮಿಕ ಬೆಳವಣಿಗೆಯಲ್ಲಿ ಮಕ್ಕಳಿಗೆ ಉತ್ತಮ ಚಟುವಟಿಕೆ ಯೊಂದಿಗೆ ಮತ್ತು ಬೆಳವಣಿಗೆಗೆ ಪೂರಕವಾಗಿ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಗರ್ಭಿಣಿ, ಬಾಣಂತಿಯರ ಆರೈಕೆ ಮತ್ತು ಆರೋಗ್ಯ ಪೂರೈಕೆಗೆ ಕಾರಣವಾಗುತ್ತಿದೆ ಎಂದು ಹೇಳಿದರು. ತಾಲೂಕಿನಲ್ಲಿ ಸಾವಿರ ಜನಸಂಖ್ಯೆ ಪ್ರದೇಶವನ್ನು ಗುರುತಿಸಿ ಅಂಗನವಾಡಿ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಅದರಂತೆ ಬಿಟ್ಟಂಗಾಲ ಪಂಚಾಯಿತಿ ವ್ಯಾಪ್ತಿಯ ಪೆಗ್ಗರಿ ಕಾಡು ಕಾಲೋನಿ, ಬೇಟೋಳಿ ಗ್ರಾಮ ಪಂಚಾಯಿತಿಯ ದೊಡ್ಡಿ ಬಾಣೆ, ಕೆದಮುಳ್ಳೂರು ಎಸ್.ಎಸ್. ಕಾಲೋನಿ, ಅರುವತ್ತೊಕ್ಲು ಪಂಚಾಯಿತಿ ವ್ಯಾಪ್ತಿಯ ಕಾವೇರಿ ಹಿಲ್ಸ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿದ್ಯಾನಗರ ಮತ್ತು ನಿಸರ್ಗ ಬಡಾವಣೆಯಲ್ಲಿ ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಅಧಿಕಾರಿ ರಾಜೇಶ್ ಮಾತನಾಡಿ ತಾಲೂಕಿ ನಲ್ಲಿರುವ ೩೩೬ ಅಂಗನವಾಡಿಗಳ ಜತೆಗೆ ಹೊಸ ಆರು ಅಂಗನವಾಡಿ ಕೇಂದ್ರಗಳನ್ನು ಹೆಚ್ಚುವರಿಯಾಗಿ ತೆರೆಯಲಾಗಿದೆ. ಇವುಗಳು ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗೆ ಪೂರಕವಾಗಿ ಕಾರ್ಯ ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು. ನಂತರ ಈ ವ್ಯಾಪ್ತಿಯ ಫಲಾನುಭವಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಿದರು.
ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೋಣಿಯಂಡ ಅಪ್ಪಣ್ಣ, ಗ್ರಾ.ಪಂ. ಅಧ್ಯಕ್ಷೆ ರಮ್ಯ, ಉಪಾಧ್ಯಕ್ಷೆ ಸರಸು, ಗ್ರಾ.ಪಂ. ಸದಸ್ಯರುಗಳು, ಗ್ರಾಮಸ್ಥರು ಇದ್ದರು.