ನಾಪೋಕ್ಲು, ಡಿ. ೧೫: ಕೊಡಗಿನ ಕಡಿಯತ್‌ನಾಡು ಹಾಗೂ ನಾಲ್ಕುನಾಡು ವ್ಯಾಪ್ತಿಯಲ್ಲಿ ಬೆಳೆಯುವ ಕಾಫಿ ಪ್ರಪಂಚದಲ್ಲೇ ಉತ್ತಮ ಗುಣಮಟ್ಟದ್ದಾಗಿದೆ ಎಂದು ಚಾರ್ಟೆಡ್ ಅಕೌಂಟೆAಟ್, ಬೆಳೆಗಾರ ಐತಿಚಂಡ ನಾಣಯ್ಯ ಹೇಳಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಜಯ ಕಾಫಿ ವರ್ಕ್ಸ್ ನೆಲಜಿ, ಎಲ್‌ಡಿಸಿ ಕಂಪೆನಿ ಕುಶಾಲನಗರ, ಬೆಂಗಳೂರು, ಕೆವಿಕೆ ಗೋಣಿಕೊಪ್ಪ ಇವರುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಎರೆಹುಳು ಗೊಬ್ಬರ ತಯಾರಿಕೆಯ ತರಬೇತಿ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತದ ಕಾಫಿಗೆ ವಿದೇಶದಲ್ಲಿ ಉತ್ತಮ ಬೇಡಿಕೆ ಇದೆ. ಯುರೋಪಿಯನ್ ದೇಶಗಳಲ್ಲಿ ಕಾಫಿಯನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಪ್ರಪಂಚದಲ್ಲಿನ ಕಾಫಿ ಉತ್ಪಾದನೆಯ ಕೇವಲ ಶೇಕಡ ನಾಲ್ಕರಷ್ಟು ಮಾತ್ರ ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ೧೯೯೪ ರಿಂದ ಕಾಫಿ ಮಂಡಳಿಯ ಹಿಡಿತದಿಂದ ಮುಕ್ತವಾಗಿ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಬಂದ ನಂತರ ಕಾಫಿಗೆ ಉತ್ತಮ ಧಾರಣೆ ಸಿಗುವಂತಾಗಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಹೆಚ್ಚಿನ ಮುತುವರ್ಜಿ ವಹಿಸಿ ಕಾಫಿ ಉತ್ಪಾದನೆ ಮಾಡುವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಡಾ. ಹರೀಶ್, ಎರೆ ಗೊಬ್ಬರ ತಯಾರಿಕೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರೆ, ಎಲ್.ಡಿ.ಸಿ. ಕಂಪೆನಿಯ ನಾಗರಾಜ ರಾವ್, ತ್ರಿಭುವನ್ ಸಾತ್ವಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಫಿಯ ಗುಣಮಟ್ಟ ಹಾಗೂ ಕಾಫಿ ತೋಟದ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡಿ ಬೆಳೆಗಾರರ ಜೊತೆ ಸಂವಾದ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ, ಕಲಿಯಾಟಂಡ ಅಯ್ಯಪ್ಪ ಮತ್ತು ಕೇಟೋಳಿರ ಕುಟ್ಟಪ್ಪ ಉಪಸ್ಥಿತರಿದ್ದರು. ಜಯ ಕಾಫಿ ವರ್ಕ್ಸ್ ಮಾಲೀಕ ಹಾಗೂ ಬೆಳೆಗಾರ ಮಂಡಿರ ಜಯ ದೇವಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಚರುವಾಳಂಡ ಸುಜಲ ನಾಣಯ್ಯ ಪ್ರಾರ್ಥಿಸಿ ಮಂಡೀರ ರಾಜಪ್ಪ ಚಂಗಪ್ಪ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಈ ಸಂದರ್ಭ ಕಂಪೆನಿಯಿAದ ಸದಸ್ಯ ಬೆಳಗಾರರಿಗೆ ಟಾರ್ಪಲ್ ಹಾಗೂ ಎರೆಹುಳು ತೊಟ್ಟಿಯನ್ನು ವಿತರಿಸಲಾಯಿತು. ಮಂಡೀರ ಕಿಶೋರ್ ತಮ್ಮಯ್ಯ ಹಾಗೂ ಕೈಬುಲಿರ ಉಮೇಶ್ ಉತ್ತಪ್ಪ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಂಡರು.