ಗೋಣಿಕೊಪ್ಪ ವರದಿ, ಡಿ. ೧೩ : ಸುಮಾರು ೪೫ ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಬೀಡು ಬಾಡತಯ್ಯಪ್ಪ ಅಂಬಲ ಆಚರಣಾ ಕಾರ್ಯಕ್ಕೆ ಗ್ರಾಮಸ್ಥರು ಮತ್ತೆ ಚಾಲನೆ ನೀಡಿದರು.

ಪುತ್ತರಿ ಕೋಲ್‌ಮಂದ್ ಹಿನ್ನೆಲೆ, ಗ್ರಾಮದ ಹಿರಿಯರು, ಅಂಬಲಕ್ಕೆ ಒಳಪಡುವ ಕುಟುಂಬಸ್ತರು ಒಂದಾಗಿ ಸೇರಿ ದೇವರಲ್ಲಿ ಪ್ರಾರ್ಥಿಸಿ ಆಚರಣೆ ಮಾಡಿದರು. ಸಾಂಪ್ರದಾಯಿಕ ಉಡುಗೆ ತೊಟ್ಟು ತಳಿಯತಕ್ಕಿ ಬೆಳಕಿನೊಂದಿಗೆ ಅಂಬಲ ಪ್ರದಕ್ಷಿಣೆ ಹಾಕಿದರು.

ಅಂಬಲಕ್ಕೆ ಒಳಪಡುವ ಚೆಪ್ಪುಡೀರ, ಅಲ್ಲಾರಂಡ, ಆಂಡಮಾಡ, ಬಾನಂಡ, ಮಲ್ಲೇಂಗಡ, ಆಲೆಮಾಡ, ನಂಬುಡುಮಾಡ ಕುಟುಂಬಸ್ತರು ಅಂಬಲಕ್ಕೆ ಪಟ್ಟ್ ಹಿಡಿದು ಹೆಜ್ಜೆ ಹಾಕಿ ಆಚರಣೆಗೆ ಮುನ್ನುಡಿ ಇಟ್ಟರು. ನಂತರ ಅಂಬಲದ ಸುತ್ತಲೂ ಪ್ರದಕ್ಷಿಣೆ ಹಾಕಿ ದೇವರನ್ನು ಪ್ರಾರ್ಥಿಸಿದರು. ಅಂಬಲದ ಪ್ರತೀಕವಾಗಿರುವ ಹಾಲು ಮರಕ್ಕೆ ಪೂಜೆ ಸಲ್ಲಿಸಲಾಯಿತು. ಗ್ರಾಮದ ಹಿರಿಯರು ಮತ್ತು ಯುವಕರು ಒಂದಾಗಿ ಕೋಲಾಟ್ ಮೂಲಕ ಆಚರಣೆ ಮಾಡಿದರು. ಅಂಬಲಕ್ಕೆ ಮುಖ್ಯ ಸ್ಥಾನದಲ್ಲಿ ಆಪಟ್ಟೀರ ಚಂಗಪ್ಪ, ಪುಚ್ಚಿಮಾಡ ರಾಯ್ ಪಾಲ್ಗೊಂಡರು.

ರುದ್ರಬೀಡು ಬಾಡತಯ್ಯಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಚೆಪ್ಪುಡೀರ ರಘು ನಾಣಯ್ಯ ಮಾತನಾಡಿ, ಸುಮಾರು ೪೫ ವರ್ಷಗಳಿಂದ ಆಚರಣೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಚಾಲನೆ ನೀಡಲಾಗಿದೆ. ಆಂಡಮಾಡ ಕುಟುಂಬಸ್ತರು ಇಲ್ಲಿ ತಕ್ಕರಾಗಿ ಜವಬ್ದಾರಿ ನಿಭಾಯಿಸುತ್ತಾರೆ. ಇದರಂತೆ ಎತ್ತ್ ಪೊರಾಟದೊಂದಿಗೆ ಮಾಯಮುಡಿ ಗ್ರಾಮದಲ್ಲಿರುವ ಕೋಲ್‌ಬಾಣೆ ಕೂಟತ್‌ಮಾವ್ ಮಂದ್‌ಗೆ ತೆರಳಿ ಅಲ್ಲಿ ಕೋಲಾಟದಲ್ಲಿ ಪಾಲ್ಗೊಳ್ಳುವ ಆಚರಣೆಯ ಹಿನ್ನೆಲೆ ಇದೆ. ಗ್ರಾಮದ ಜನರು ಒಂದಾಗಿ ಸೇರಿ ಆಚರಿಸಲಾಗುವುದು ಎಂದರು.

ಈ ಸಂದರ್ಭ ಗ್ರಾಮದ ಪ್ರಮುಖರಾದ ಚೆಪ್ಪುಡೀರ ಪ್ರದೀಪ್ ಪೂವಯ್ಯ, ಮದು ಅಪ್ಪಣ್ಣ, ಆಲೆಮಾಡ ಗಣಪತಿ, ಹರೀಶ್, ಅಲ್ಲಾರಂಡ ಸೋಮಯ್ಯ, ನಂಬುಡುಮಾಡ ಉತ್ತಯ್ಯ, ಸುರೇಶ್, ಮಲ್ಲೇಂಗಡ ಪೂಣಚ್ಚ, ಕವನ್, ಅಂಡಮಾಡ ಹರೀಶ್ ಇದ್ದರು.