ಶ್ರೀಮAಗಲ, ಡಿ. ೧೩: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಿರುವ ಮರೆನಾಡ್ ಕೊಡವ ಸಮಾಜದಲ್ಲಿ ನಿನ್ನೆ ಪುತ್ತರಿ ಕೋಲ್‌ಮಂದ್ ಕಾರ್ಯಕ್ರಮ ಜರುಗಿತು.

ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯುವ ಜನರ ಪಾತ್ರ ಹಿರಿದಾಗಿದ್ದು, ಉದ್ಯೋಗ ನಿಮಿತ್ತ ಹೊರಗೆ ವಲಸೆ ಹೋಗುತ್ತಿರುವ ಜನಾಂಗದ ಯುವ ಜನರನ್ನು ಕೊಡಗಿನಲ್ಲಿಯೇ ಅವಕಾಶ ಸೃಷ್ಟಿಸಿ ಬದುಕು ಕಲ್ಪಿಸಿಕೊಡುವ ಅಗತ್ಯತೆ ಇದೆ ಎಂದು ಅಖಿಲ ಕೊಡವ ಸಮಾಜದ ನೂತನ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಅಭಿಪ್ರಾಯಪಟ್ಟರು.

ಬಾಡಗರಕೇರಿಯಲ್ಲಿ ಮರೆನಾಡ್ ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಮರೆನಾಡ್ ಪುತ್ತರಿ ನಾಡ್ ಕೋಲ್ ಮಂದ್ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಬಗ್ಗೆ ಡಿಸೆಂಬರ್ ೨೦ ರಂದು ಅಖಿಲ ಕೊಡವ ಸಮಾಜದ ವೀರಾಜಪೇಟೆ ಸಭಾಂಗಣದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ಕೊಡವ ಜನಾಂಗದ ಯುವಪೀಳಿಗೆಗೆ ಕೊಡಗಿನಲ್ಲಿಯೇ ಉದ್ಯೋಗ ಕಲ್ಪಿಸುವ ಮತ್ತು ಹೊರಗೆ ನೆಲೆಸಿರುವ ಯುವ ಪೀಳಿಗೆಯನ್ನು ಜಿಲ್ಲೆಯತ್ತ ಆಕರ್ಷಿಸಲು ಇರುವ ಅವಕಾಶದ ಬಗ್ಗೆ ಚಿಂತನೆ ನಡೆಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ ಅವರು, ಮುಂದೆ ಕಾರ್ಯಾಗಾರ ಹಮ್ಮಿಕೊಳ್ಳುವ ಕುರಿತು ಹೇಳಿದರು.

೧೯೪೨ರಲ್ಲಿ ಸ್ಥಾಪನೆಯಾದ ಅಖಿಲ ಕೊಡವ ಸಮಾಜದ ಸ್ಥಾಪಕಾಧÀ್ಯಕ್ಷರು ಪರದಂಡ ಕುಟುಂಬದವರಾಗಿದ್ದರು. ಇದೀಗ ಮತ್ತೆ ನಮ್ಮ ಕುಟುಂಬಕ್ಕೆ ಈ ಸ್ಥಾನ ದೊರೆತಿದ್ದು, ಅಖಿಲ ಕೊಡವ ಸಮಾಜದ ಗತವೈಭವವನ್ನು ಮರುಕಳಿಸಲು ಎಲ್ಲರ ಸಹಕಾರ ಪಡೆದು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿ ಮೊದಲ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿರುವ ನನಗೆ ಮರೆನಾಡು ಕೊಡವ ಸಮಾಜದಲ್ಲಿ ಪುತ್ತರಿ ಕೋಲ್ ಮಂದ್ ಸಾಂಸ್ಕೃತಿಕ ವೈಭವದ ಆಚರಣೆ ನೋಡಿ ಹೆಮ್ಮೆಯಾಗಿದೆ. ಕೊಡವ ಸಂಸ್ಕೃತಿ ಪಾಲನೆಯಾಗಬೇಕು, ಜನಾಂಗದಲ್ಲಿ ಭೂಮಿ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಆದ್ದರಿಂದ ಕೊಡವರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿಯೂ ಅಖಿಲ ಕೊಡವ ಸಮಾಜ ಚಿಂತನೆ ನಡೆಸಲಿದೆ. ಪ್ರಸ್ತುತ ಮಾಹಿತಿ ತಂತ್ರಜ್ಞಾನ ವೇಗವಾಗಿದ್ದು, ಇದರೊಂದಿಗೆ ವಿಶಿಷ್ಟ ಸಂಸ್ಕೃತಿಯ ಪಾಲನೆ - ಪೋಷಣೆಯೂ ಅಗತ್ಯವಿದೆ ಎಂದು ಸುಬ್ರಮಣಿ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಕುಪ್ಪುಡಿರ ಪೊನ್ನು ಮುತ್ತಪ್ಪ ಅವರು, ಗಡಿ ಪ್ರದೇಶದಲ್ಲಿರುವ ಮರೆನಾಡ್ ಕೊಡವ ಸಮಾಜದ ಅಭಿವೃದ್ಧಿಗೆ ಜನಾಂಗದ ಪ್ರತಿಯೋರ್ವರ ಸಹಕಾರ ಅಗತ್ಯ ಎಂದರು.

ನಾಡ್ ತಕ್ಕ ಕುಟುಂಬವಾದ ಕಾಯಪಂಡ, ಚಂಗಣಮಾಡ, ಬೊಳ್ಳೇರ ಕುಟುಂಬದ ತಕ್ಕ ಮುಖ್ಯಸ್ಥರು ಸಾಂಪ್ರದಾಯಿಕ ಮಂದ್ ಪುಡಿಪ ಮೂಲಕ ಮಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮೊದಲು ಮುಖ್ಯ ದ್ವಾರದಿಂದ ತಕ್ಕ ಮುಖ್ಯಸ್ಥರು, ಅತಿಥಿಗಳನ್ನು ತಳಿಯತಕ್ಕಿ ಬೊಳಕ್, ಒಡ್ಡೋಲಗದೊಂದಿಗೆ ಮಂದ್‌ಗೆ ಕರೆತರಲಾಯಿತು.

ಈ ಸಂದರ್ಭ ಕಳೆದ ಹಲವು ಅವಧಿಯಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮಲ್ಲೇಂಗಡ ಧನಂಜಯ ಮತ್ತು ಜಂಟಿ ಕಾರ್ಯದರ್ಶಿಯಾಗಿ ಗುಡ್ಡಮಾಡ ಚಂಗಪ್ಪ ಅವರ ದೀರ್ಘಕಾಲದ ಸೇವೆ ಪರಿಗಣಿಸಿ ಮತ್ತು ಅಂತರ್ ಕೊಡವ ಸಮಾಜ ಸ್ಪರ್ಧೆಯಲ್ಲಿ ಕಪ್ಪೆಯಾಟ್‌ನಲ್ಲಿ ಪ್ರಥಮ ಸ್ಥಾನ ಪಡೆದ ಕರ್ತಮಾಡ ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು.

ಮರೆನಾಡ್ ಕೊಡವ ಸಮಾಜದ ಗೌರವ ಅಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಗೌರವ ಕಾರ್ಯದರ್ಶಿ ಅಯ್ಯಮಾಡ ಮುತ್ತಣ್ಣ, ಖಜಾಂಚಿ ಕಾಯಪಂಡ ಮಧು ಮೋಟಯ್ಯ, ಉಪಾಧ್ಯಕ್ಷರುಗಳಾದ ಕರ್ತಮಾಡ ಮಿಲನ್ ಮೇದಪ್ಪ, ಕುಪ್ಪಣಮಾಡ ಬೇಬಿ ಚೋಂದಮ್ಮ, ಸಲಹೆಗಾರ ಕಾಳಿಮಾಡ ಮುತ್ತಣ್ಣ, ಸದಸ್ಯರುಗಳಾದ ಕಾಯಪಂಡ ಚಿಣ್ಣಪ್ಪ, ಅಣ್ಣಳಮಾಡ ಲಾಲ ಅಪ್ಪಣ್ಣ, ಕಾಯಪಂಡ ರಾಮು ಪೆಮ್ಮಯ್ಯ, ಚೋನಿರ ಮಧು ಕಾರ್ಯಪ್ಪ, ಕುಪ್ಪಣಮಾಡ ಪೆಮ್ಮಯ್ಯ, ಕಾಳಿಮಾಡ ಸೋಮಣ್ಣ, ಮೀದೇರಿರ ಕವಿತಾ, ಬೊಟ್ಟಂಗಡ ರವೀಂದ್ರ, ಮೀದೇರಿರ ರಾಜ, ಮೂಕಳಮಾಡ ವೀಟು, ಅಣ್ಣಳಮಾಡ ಗಿರೀಶ್, ಬಿರುನಾಣಿ ಗ್ರಾ.ಪಂ. ಅಧ್ಯಕ್ಷೆ ಮಲ್ಲೇಂಗಡ ರೀನಾ ಹಾಜರಿದ್ದರು.

ಈ ಸಂದರ್ಭದಲ್ಲಿ ಕೋಲಾಟ್ ಸೇರಿದಂತೆ ವಿವಿಧ ಜನಪದ ಕಲೆಗಳ ಪ್ರದರ್ಶನ ಜರುಗಿತು. ಸುಜ್ಯೋತಿ ವಿದ್ಯಾಸಂಸ್ಥೆಯ ಮಕ್ಕಳು, ಸ್ಥಳೀಯ ಕಲಾವಿದ ಚಂಗಣಮಾಡ ಬೋಪಣ್ಣ, ತಂಡದ ಸದಸ್ಯರು, ಪುತ್ತು ಭಗವತಿ ಮಹಿಳಾ ತಂಡದಿAದ ಕೋಲಾಟ್, ಬೊಳಕಾಟ್, ಕತ್ತಿಯಾಟ್, ಉಮ್ಮತ್ತಾಟ್‌ನಂತಹ ಪ್ರದರ್ಶನ ನಡೆಯಿತು. ಮೃತ್ಯುಂಜಯ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಫಲಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.