ಕಣಿವೆ, ಡಿ. ೧೩: ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ ಹಾಗೂ ಕೊಡಗು ಜಿಲ್ಲಾಡಳಿತ ಹಮ್ಮಿಕೊಂಡಿರುವ ಉದ್ಯೋಗ ಮೇಳದ ಪ್ರಯೋಜನವನ್ನು ನಿರುದ್ಯೋಗಿ ವಿದ್ಯಾವಂತ ತರುಣ ತರುಣಿಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಕರೆಕೊಟ್ಟರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಯೋಗಿ ಇಲಾಖೆ ಹಾಗೂ ಕೊಡಗು ಜಿಲ್ಲಾಡಳಿತದ ವತಿಯಿಂದ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದ ಜೊತೆಗೆ ಅತ್ಯುತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು. ವಿದ್ಯಾಭ್ಯಾಸ ಪೂರೈಸಿದ ಬಳಿಕ ಪೋಷಕರಿಗೆ ಹೊರೆಯಾಗದಂತೆ ಪ್ರತಿಯೊಬ್ಬರೂ ಒಂದೊAದು ಉದ್ಯೋಗವನ್ನು ಅಲಂಕರಿಸಬೇಕು ಎಂಬ ಮಹದುದ್ದೇಶ ದಿಂದ ಇಂತಹ ಮೇಳಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕರು ಹೇಳಿದರು. ಜಿಲ್ಲಾಧಿಕಾರಿ ಮಾತನಾಡಿ, ಸರ್ಕಾರ ಹಮ್ಮಿಕೊಳ್ಳುವ ಉದ್ಯೋಗ ಮೇಳಗಳಲ್ಲಿ ಉದ್ಯೋಗ ಕಂಡುಕೊಳ್ಳುವ ಮೂಲಕ ಇತರರಿಗೆ ಉದ್ಯೋಗಗಳನ್ನು ನೀಡುವಷ್ಟರ ಮಟ್ಟಿಗೆ ಅಭಿವೃದ್ಧಿಯಾಗ ಬೇಕೆಂದು ಯುವ ಜನಾಂಗಕ್ಕೆ ಕರೆಕೊಟ್ಟರು.

ಕೊಡಗು ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿದರು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ, ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಟಿ.ಆರ್. ರಾಜಗೋಪಾಲ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ಕುಶಾಲನಗರ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ. ಸೀನಪ್ಪ, ಸರ್ಕಾರಿ ಪಾಲಿಟಿಕ್ನಿಕ್ ಪ್ರಾಂಶುಪಾಲ ಪ್ರೊ. ಟಿ. ರಾಜಣ್ಣ, ಕುಶಾಲನಗರ ಪುರಸಭೆ ಅಧಿಕಾರಿ ಶಿವಪ್ಪನಾಯಕ್, ಜಿಲ್ಲಾ ಉದ್ಯೋಗ ಅಧಿಕಾರಿ ಸಿ.ಎಂ. ಉಮಾ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಗಣಪತಿ, ಜಿಲ್ಲಾ ಹೊಟೇಲ್ ಅಸೋಸಿಯೇಷನ್ ಕೋಶಾಧಿಕಾರಿ ಕೆ.ಕೆ. ಭಾಸ್ಕರ್, ಗುಡ್ಡೆಹೊಸೂರು ಪಂಚಾಯಿತಿ ಉಪಾಧ್ಯಕ್ಷೆ ಯಶೋಧಾ ಮತ್ತಿತರರಿದ್ದರು. ಶಿಕ್ಷಕಿಯರಾದ ಯಶುಮತಿ ಹಾಗು ಗಾಯತ್ರಿ ಕಾರ್ಯಕ್ರಮ ನಿರ್ವಹಿಸಿದರು.