ಮಡಿಕೇರಿ, ಡಿ. 12: ಜಿಲ್ಲಾಸ್ಪತ್ರೆಗೆ ನುಗ್ಗಿ ಕಲಿಕಾ ವೈದ್ಯ ವಿದ್ಯಾರ್ಥಿಗಳ ಬ್ಯಾಗ್, ಬ್ಯಾಗ್‍ನಲ್ಲಿದ್ದ ಹಣ ಹಾಗೂ ಹೊರಾವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿದ್ದ ಚೋರನನ್ನು ಸೆರೆ ಹಿಡಿಯುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ನ. 27 ರಂದು ಸಂಜೆ ವೇಳೆಗೆ ಆಸ್ಪತ್ರೆಯ ಸಿಬ್ಬಂದಿಯಂತೆ ಒಳನುಗ್ಗಿದ್ದ ಚೋರನೋರ್ವ ಆಸ್ಪತ್ರೆಯಿಡೀ ಸುಳಿದಾಡಿ ಕರ್ತವ್ಯನಿರತ ವೈದ್ಯರ ಕೊಠಡಿಯೊಳಗೆ ನುಗ್ಗಿ ಕಲಿಕಾ ವೈದ್ಯ ವಿದ್ಯಾರ್ಥಿಗಳು ಇರಿಸಿದ್ದ ಬ್ಯಾಗ್‍ಗಳನ್ನು ಜಾಲಾಡಿ ಅದರೊಳಗಡೆ ಇದ್ದ ಹಣವನ್ನು ದೋಚಿದ್ದ. ಜೊತೆಗೆ ಒಂದು ಬ್ಯಾಗ್‍ನೊಳಗಡೆ ದೊರೆತ ದ್ವಿಚಕ್ರ ವಾಹನದ ಕೀಯನ್ನು ಕಸಿದ್ದು ಆಸ್ಪತ್ರೆಯ ಹೊರಾವರಣದಲ್ಲಿ ನಿಲ್ಲಿಸಿದ್ದ ವಾಹನವನ್ನು ಕದ್ದೊಯ್ದು ಪರಾರಿಯಾಗಿದ್ದ.

ಈ ಸಂಬಂಧ ಮೈಸೂರಿನ ವೈದ್ಯ ವಿದ್ಯಾರ್ಥಿನಿ ತರಿಕೆರೆಯ ಸೃಷ್ಟಿ ನೀಡಿದ್ದ ದೂರಿನ ಆಧಾರದಲ್ಲಿ ನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಕಳ್ಳನ ಸೆರೆಗೆ ಬಲೆ ಬೀಸಿದ್ದರು.

ವೀರಾಜಪೇಟೆಯಲ್ಲಿ ಸೆರೆ!

ಈ ಬಗ್ಗೆ ತನಿಖೆ ಮುಂದುವರಿಸಿದ ಠಾಣಾಧಿಕಾರಿ ಶ್ರೀನಿವಾಸ್ ನೇತೃತ್ವದ ಪೊಲೀಸರ ತಂಡ ಕಳ್ಳನ ಜಾಡು ಹಿಡಿದು ಇಂದು ವೀರಾಜಪೇಟೆಯಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿ ದ್ದಾರೆ. ಮೂಲತಃ ಮೂರ್ನಾಡು ಹೋಬಳಿ, ಹೊದ್ದೂರು ಬಳಿಯ ಕಬಡಕೇರಿ ನಿವಾಸಿ, ಎಂ.ಕೆ. ಹರೀಶ್ ಕುಮಾರ್ ಎಂಬವರ ಪುತ್ರ ಟಿಂಬರ್ ಕೆಲಸ ಮಾಡಿಕೊಂಡಿರುವ ಎಂ.ಹೆಚ್. ಶಿವಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ನಿಂದ ಸುಜುಕಿ ಪ್ಲೇಸಸ್ ದ್ವಿಚಕ್ರ ವಾಹನ (ಕೆಎ 05 ಎಲ್‍ಕೆ 5768) ಹಾಗೂ ಬ್ಯಾಗ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಳಪಡಿಸಲಾಗಿದೆ.

ಪೂಜೆ ಮಾಡಿ ಸಿಂಗಾರ..!

ಕಳವು ಮಾಡಿದ್ದ ವಾಹನಕ್ಕೆ ಪೂಜೆ ಮಾಡಿಸಿರುವ ಆರೋಪಿ, ಹೂವು ಹಾಗೂ ರಿಬ್ಬನ್ ಅಂಟಿಸಿ ಸಿಂಗಾರ ಮಾಡಿ ತಾನೇ ಖರೀದಿಸಿದ ವಾಹನವೆಂದು ಜನರೆದುರು ಹೇಳಿಕೊಂಡು ಓಡಾಡುತ್ತಿದ್ದ. ಬ್ಯಾಗ್‍ನಲ್ಲಿ ದೊರೆತ ವೈದ್ಯರ ಹಣವನ್ನು ಖರ್ಚು ಮಾಡಿ ಪಾರ್ಟಿ ಮಾಡಿದ್ದಾನೆ. ಆದರೆ ಪೊಲೀಸರ ಚಾಣಾಕ್ಷತನದಿಂದಾಗಿ 15 ದಿನಗಳ ಒಳಗಡೆ ಸೆರೆಮನೆ ಸೇರುವಂತಾಗಿದೆ. -ಸಂತೋಷ್