ಕೊಡ್ಲಿಪೇಟೆ, ಡಿ. 12: ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅವರ ಸಂಸದರ ನಿಧಿಯಡಿ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ ಹೈಟೆಕ್ ಶೌಚಾಲಯವನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್.ಎಸ್.ಚಂದ್ರಮೌಳಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೆ.ಸಿ.ರಾಮಮೂರ್ತಿಯವರು ವಿದ್ಯಾಸಂಸ್ಥೆಗೆ ಆಗಮಿಸಿದ ಸಂದರ್ಭ ಸಂಸದರ ನಿಧಿಯಡಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ 15 ಲಕ್ಷ ಅನುದಾನವನ್ನು ನೀಡಿದ್ದು, ನಿರ್ಮಿತಿ ಕೇಂದ್ರದ ಮೂಲಕ ನಿರ್ದೇಶಕ ಬಿ.ಕೆ.ಯತೀಶ್ ಅವರ ಮೇಲ್ವಿಚಾರಣೆಯಲ್ಲಿ ಹೈಟೆಕ್ ಶೌಚಾಲಯವನ್ನು ನಿರ್ಮಿಸಲಾಗಿದೆ ಎಂದರು.
ಈ ಸಂದರ್ಭ ಸಂಸ್ಥೆಯ ಗೌರವಾಧ್ಯಕ್ಷ ಎಸ್.ಎಸ್. ನಾಗರಾಜ್, ಉಪಾಧ್ಯಕ್ಷ ಸಿ.ವಿ. ಶಂಭುಲಿಂಗಪ್ಪ, ಖಜಾಂಜಿ ಡಾ. ಉದಯಕುಮಾರ್, ನಿರ್ದೇಶಕರುಗಳಾದ ಯು.ವಿ. ಶಿವಪ್ರಸಾದ್, ಡಿ.ವಿ. ಹರೀಶ್, ಬಿ.ಕೆ. ಯತೀಶ್, ಪದವಿ ಕಾಲೇಜು ಪ್ರಾಂಶುಪಾಲ ನಿರಂಜನ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಗದೀಶ್ ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.