ಕೂಡಿಗೆ, ಡಿ. 12: ತಾ. 11 ರಂದು ಪತ್ರಿಕೆಯಲ್ಲಿ ಪ್ರಕಟವಾದ ‘ಸೇತುವೆ ಕುಸಿತ, ಸ್ಪಂದಿಸದ ಅಧಿಕಾರಿಗಳು..’ ಎಂಬ ವರದಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸ್ಪಂದಿಸಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಕಿರು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಮಗಾರಿಯನ್ನು ಶೀಘ್ರವಾಗಿ ನಡೆಸಲು ಕ್ರಿಯಾ ಯೋಜನೆ ತಯಾರಿಸಲು ಸಂಬಂಧಿಸಿದ ಇಂಜಿನಿಯರ್ ವಿಭಾಗದವರಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಮಳೆಯ ಪ್ರಮಾಣವು ಕಡಿಮೆ ಆಗಿರುವುದರಿಂದ ಅವಶ್ಯಕತೆ ಇರುವ ರಸ್ತೆ ಮತ್ತು ಕಿರು ಸೇತುವೆಯನ್ನು ಸರಿಪಡಿಸಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.