ಕುಶಾಲನಗರ, ಡಿ. ೧೦: ಲಯನ್ಸ್ ಇಂಟರ್‌ನ್ಯಾಷನಲ್ ವಲಯ ೪, ಜಿಲ್ಲೆ ೩೧೭ ಡಿ ಸಂಸ್ಥೆಯ ಪ್ರಾಂತೀಯ ಸಮ್ಮೇಳನ ತಾ. ೧೨ ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ವಲಯ ಸಮ್ಮೇಳನ ಸಂಘಟನಾ ಸಮಿತಿಯ ಅಧ್ಯಕ್ಷ ಟಿ.ಕೆ. ರಾಜೀವ್ ತಿಳಿಸಿದ್ದಾರೆ. ಅವರು, ಕುಶಾಲನಗರ ಪತ್ರಿಕಾ ಭವನದಲ್ಲಿ ಮಾತನಾಡಿ, ಕುಶಾಲನಗರ ರೈತ ಸಹಕಾರ ಭವನದಲ್ಲಿ ಅಂದು ಸಂಜೆ ೪.೩೦ ರಿಂದ ಸಮ್ಮೇಳನ ಚಾಲನೆಗೊಳ್ಳಲಿದ್ದು, ನಿವೃತ್ತ ಪ್ರೊ. ಬಿ.ಎನ್. ಬಾಲಾಜಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸುಂಟಿಕೊಪ್ಪ ಲಯನ್ಸ್ ಆಶ್ರಯದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಲಯನ್ಸ್ ಜಿಲ್ಲೆಯ ೧೪ ಕ್ಲಬ್‌ಗಳ ೩೫೦ ರಿಂದ ೪೦೦ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ೫ ಜಿಲ್ಲೆಗಳಿಂದ ಲಯನ್ಸ್ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಲಯನ್ಸ್ ಸಂಸ್ಥೆಯ ಬೆಳವಣಿಗೆ ಮತ್ತು ಸೇವಾ ಕಾರ್ಯಗಳ ವೇಗವನ್ನು ದ್ವಿಗುಣಗೊಳಿಸುವುದು ಸಮ್ಮೇಳನದ ಉದ್ದೇಶ ಎಂದರು. ಸಮಾವೇಶದಲ್ಲಿ ವಲಯ ಅಧ್ಯಕ್ಷರು, ಗಣ್ಯರು ಪಾಲ್ಗೊಳ್ಳಲಿದ್ದು, ಈ ಸಂಬAಧ ಈಗಾಗಲೇ ಎಲ್ಲಾ ಪೂರ್ವ ಸಿದ್ಧತೆಗಳು ನಡೆದಿವೆ ಎಂದರು. ಲಯನ್ಸ್ ಸಂಸ್ಥೆ ಯಾವುದೇ ಫಲಾಪೇಕ್ಷೆ ಇಲ್ಲದೆ, ಅಗತ್ಯವಿರುವ ಜನರಿಗೆ ಸಹಾಯಹಸ್ತ ನೀಡುತ್ತಿದೆ. ಈ ಸಂಬAಧ ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ಲಯನ್ಸ್ ಶಾಖೆಗಳು ಹಲವು ರೀತಿಯ ಸೇವಾ ಯೋಜನೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಬಂದಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಲಯನ್ಸ್ ವಲಯಾಧ್ಯಕ್ಷ ಕೆ. ಶಾಶ್ವತ್ ಬೊಪ್ಪಣ್ಣ, ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಸಿ.ವಿ. ನಿಖೇಶ್, ಖಜಾಂಚಿ ಗ್ಲೆನ್ ಮೆನೇಜಸ್, ಸುಂಟಿಕೊಪ್ಪ ಲಯನ್ಸ್ ಅಧ್ಯಕ್ಷ ಚಮನ್ ಚಿಟ್ಟಿಯಪ್ಪ ಇದ್ದರು.