ಶನಿವಾರಸAತೆ, ಡಿ. ೧೦: ಪಟ್ಟಣದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿAದ ನೆರವೇರಿತು. ಇಡೀ ಪಟ್ಟಣ ಸಂಪೂರ್ಣ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು.
ಹನುಮ ಜಯಂತಿ ಪ್ರಯುಕ್ತ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕೇಸರಿ ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ತ್ಯಾಗರಾಜ ಕಾಲೋನಿಯ ಶ್ರೀ ವಿಜಯ ವಿನಾಯಕ ದೇವಸ್ಥಾನ, ಬನ್ನಿಮಂಟಪ, ಮುಖ್ಯರಸ್ತೆಯಲ್ಲಿರುವ ಶ್ರೀರಾಮ ಮಂದಿರ, ಶ್ರೀ ಗಣಪತಿ- ಚಂದ್ರಮೌಳೇಶ್ವರ-ಪಾರ್ವತಿ ದೇವಸ್ಥಾನ, ಶ್ರೀ ಬೀರಲಿಂಗೇಶ್ವರ- ಪ್ರಬಲಭೈರವಿ ದೇವಸ್ಥಾನಗಳನ್ನು ಬಾಳೆಕಂಬ ಹಾಗೂ ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು.
ರಾತ್ರಿ ಶ್ರೀವಿಜಯ ವಿನಾಯಕ ದೇವಸ್ಥಾನದಿಂದ ಆಂಜನೇಯ ಮೂರ್ತಿ ಇರಿಸಿದ್ದ ಬೆಳ್ಳಿರಥ, ವಾದ್ಯಗೋಷ್ಠಿ, ವೀರಗಾಸೆ ಕುಣಿತ, ಡಿಜೆ ಸೌಂಡ್ಸ್, ಸಿಡಿಮದ್ದು ಪ್ರದರ್ಶನದ ಜೊತೆ ಬೃಹತ್ ಶೋಭಾಯಾತ್ರೆ ಮೆರವಣಿಗೆ ಹೊರಟು ಗುಡುಗಳಲೆಯ ಶ್ರೀಬಸವೇಶ್ವರ ದೇವಸ್ಥಾನ ತಲುಪಿತು. ನಂತರ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀರಾಮ ಮಂದಿರ ತಲುಪಿ ಅಲ್ಲಿಂದ ಬನ್ನಿ ಮಂಟಪಕ್ಕೆ ಆಗಮಿಸಿ ಕಾರ್ಯಕ್ರಮ ಪೂರ್ಣಗೊಂಡಿತು. ಸಾವಿರಾರು ಮಂದಿ ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶ್ರೀರಾಮ ಮಂದಿರದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಪೂಜಾ ಸಂದರ್ಭ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಜರಿದ್ದರು. ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಪುನೀತ್, ದಿನೇಶ್, ಸೋಮಶೇಖರ್ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿತ್ತು.