*ಸಿದ್ದಾಪುರ, ಡಿ. ೯: ಕಳೆದ ಅನೇಕ ದಶಕಗಳಿಂದ ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ. ಅಧೀನದಲ್ಲಿದ್ದ ಸುಮಾರು ೨೮ ಸೆಂಟ್ ಜಾಗ ಇದೀಗ ಖಾಸಗಿಯವರಿಗೆ ಸೇರಿದ್ದು ಎನ್ನುವ ಮಾಹಿತಿ ಬಹಿರಂಗವಾಗಿದೆ. ಖಾಸಗಿ ವ್ಯಕ್ತಿ ತನಗೆ ಸೇರಬೇಕಾದ ಜಾಗಕ್ಕೆ ಬೇಲಿ ಹಾಕಿದ್ದು, ಪಂಚಾಯ್ತಿ ಆಡಳಿತ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಯಾಗಿದೆ.
ಲಿಂಗಪ್ಪ ಎಂಬುವವರು ತಮ್ಮ ಮಕ್ಕಳಿಗೆ ಬಹಳ ಹಿಂದೆ ಜಮೀನನ್ನು ಪಾಲು ಮಾಡಿದ್ದಾರೆ. ಸರ್ವೆ ಸಂಖ್ಯೆ ೧೧೯/೧ ರಲ್ಲಿರುವ ೨೮ ಸೆಂಟ್ ಜಾಗ ದಾಖಲೆ ಪ್ರಕಾರ ಲಿಂಗಪ್ಪ ಅವರ ಪುತ್ರ ಹೆಚ್.ಎಲ್. ಕೃಷ್ಣಪ್ಪ ಎಂಬವರಿಗೆ ಸೇರಿದ್ದಾಗಿದೆ. ಇದು ಖಾಲಿ ಜಾಗವಾದ ಕಾರಣ ಹಾಗೇ ಬಿಡಲಾಗಿತ್ತು. ಈ ನಡುವೆ ಗ್ರಾ.ಪಂ ಇದು ಸರ್ಕಾರಿ ಜಾಗವೆಂದು ಭಾವಿಸಿ ತನ್ನ ಸ್ವಾಧೀನ ದಲ್ಲಿರಿಸಿ ಕೊಂಡಿದೆ. ಅಲ್ಲದೆ ನೂತನ ಕಚೇರಿ, ನಿರ್ಮಾಣಕ್ಕೂ ಎರಡು ಭಾರಿ ಗ್ರಾ.ಪಂ. ಭೂಮಿಪೂಜೆ ನೆರವೇರಿಸಿದೆ.
ಇತ್ತೀಚೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಚೇರಿ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಈ ಯೋಜನೆಗೆ ಅನುದಾನ ಬಿಡುಗಡೆಯಾಗಬೇಕಾದರೆ ಜಾಗದ ದಾಖಲೆಗಳು ಸಮರ್ಪಕವಾಗಿರಬೇಕು. ಇದನ್ನು ಪರಿಶೀಲಿಸುವ ಸಂದರ್ಭ ೨೮ ಸೆಂಟ್ ಜಾಗ ಗ್ರಾ.ಪಂ ಗೆ ಸೇರಿದಲ್ಲ, ಬದಲಿಗೆ ಕೃಷ್ಣಪ್ಪ ಎಂಬುವವರಿಗೆ ಸೇರಿದ್ದು ಎನ್ನುವ ಅಂಶ ಬೆಳಕಿಗೆ ಬಂದಿದೆ. ಗ್ರಾ.ಪಂ ತನ್ನ ಜಾಗವೆಂದು ವಾದ ಮಂಡಿಸಿದರೂ ಸೂಕ್ತ ದಾಖಲೆಗಳು ಅವರ ಬಳಿ ಲಭ್ಯವಿಲ್ಲ. ಇದು ಕೃಷ್ಣಪ್ಪ ಅವರ ವಾದಕ್ಕೆ ಪುಷ್ಠಿ ನೀಡಿದ ಕಾರಣ ಸರ್ವೆ ಮಾಡಿಸಿ ಬೇಲಿ ನಿರ್ಮಿಸಿದ್ದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾ.ಪಂ. ಅಧ್ಯಕ್ಷೆ ಅನಿತಾ, ಪಿಡಿಓ ಲೋಕೇಶ್ ಹಾಗೂ ಸದಸ್ಯ ಭುವನೇಂದ್ರ ಪೊಲೀಸರಿಗೆ ದೂರು ನೀಡಿದ್ದರು. ಕೃಷ್ಣಪ್ಪ ಅವರು ತಹಶೀಲ್ದಾರರಿಗೆ ದೂರು ನೀಡಿದ ಕಾರಣ ಮತ್ತೊಮ್ಮೆ ಎರಡೂ ಕಡೆಯಿಂದ ಸರ್ವೆ ನಡೆದು ಕೃಷ್ಣಪ್ಪ ಅವರಿಗೆ ಸೇರಿದ ಜಾಗವೆಂದು ಖಾತ್ರಿ ಪಡಿಸಿ ಜಾಗಕ್ಕೆ ಸರ್ವೆ ಕಲ್ಲು ಅಳವಡಿಸಲಾಗಿತ್ತು. ನಂತರ ಕೃಷ್ಣಪ್ಪ ಅವರು ಮತ್ತೊಮ್ಮೆ ಬೇಲಿ ಅಳವಡಿಸಿದರು. ಪಂಚಾಯಿತಿ ಮತ್ತೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಕೃಷ್ಣಪ್ಪ ಅವರು ಕೋರ್ಟ್ ಮೊರೆ ಹೋಗಿದ್ದು, ಕಾನೂನು ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಮಾತುಕತೆ ಉತ್ತಮ
ಇಷ್ಟು ವರ್ಷಗಳವರೆಗೆ ಗ್ರಾ.ಪಂ. ಅಧೀನದಲ್ಲಿದ್ದ ಜಾಗದಲ್ಲಿ ಹಳೆಯ ಕಟ್ಟಡಗಳೂ ಇವೆ. ಇದು ಸಾರ್ವಜನಿಕ ಸ್ವತ್ತು ಎಂದು ಪ್ರತಿಬಿಂಬಿತವೂ ಆಗಿದೆ. ಇದೀಗ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ಗೊಂದಲ ನಿವಾರಣೆಗೆ ಹೆಚ್ಚು ಸಮಯ ಬೇಕಾಗಬಹುದು. ಆದ್ದರಿಂದ ಮಾತುಕತೆಯ ಮೂಲಕ ಗ್ರಾ.ಪಂ. ಗೊಂದಲ ನಿವಾರಿಸಿಕೊಳ್ಳುವುದು ಸೂಕ್ತವೆಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಅಂಚೆಮನೆ ಸುಧಿ