ಕುಶಾಲನಗರ, ಡಿ. ೯: ೨೦೨೩ರ ಫೆಬ್ರವರಿ ೮ ಮತ್ತು ೯ ರಂದು ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಹಿರಿಯ ಶ್ರೀಗಳ ಸ್ಮರಣೋತ್ಸವ, ಪಟ್ಟಾಭಿಷೇಕದ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ ಸಮಾರಂಭ ನಡೆಯಲಿದ್ದು ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದ ಮಹಾ ಸ್ವಾಮೀಜಿ ಕರೆ ನೀಡಿದರು.
ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ವಾಲ್ಮೀಕಿ ಸಮುದಾಯದವರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ರೇಣೀಕೃತ ವ್ಯವಸ್ಥೆಯ ಭಾರತ ದೇಶದಲ್ಲಿ ಜಾತಿ ವ್ಯವಸ್ಥೆ ನೀತಿಯನ್ನು ಮೆಟ್ಟಿ ನಿಂತು ವಿಜೃಂಭಿಸುತ್ತಿದ್ದಾಗ ನೊಂದವರಿಗೆ, ಕೆಳಜಾತಿಯವರಿಗೆ ಜ್ಯೋತಿಯಾಗಿ ಬಂದ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನವನ್ನು ಬರೆದು ನೊಂದವರಿಗೆ ಬೆಳಕಾದರು. ಆದರೆ ಕೆಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಂವಿಧಾನಗಳ ಆಶಯವನ್ನು ಅನುಷ್ಠಾನಕ್ಕೆ ತರುವಲ್ಲಿ ನಿರ್ಲಕ್ಷö್ಯ ತಾಳುತ್ತಿರುವುದು ಖಂಡನೀಯ ಎಂದು ಶ್ರೀಗಳು ವಿಷಾದಿಸಿದರು. ಸಮುದಾಯದವರು ಸಂಘಟಿತರಾಗುವ ಮೂಲಕ ತಮಗೆ ದೊರಕಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕಿದೆ ಎಂದರು.
ವಾಲ್ಮೀಕಿ ನಾಯಕ ಸಮುದಾ ಯದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ಅಶೋಕ್, ಯುವ ಘಟಕದ ಅಧ್ಯಕ್ಷ ಚಂದನಕುಮಾರ್, ಕೂಡುಮಂಗಳೂರು ಅಧ್ಯಕ್ಷ ವೆಂಕಟೇಶ್, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಆರ್. ಮಂಜುಳಾ, ಪೊನ್ನಂಪೇಟೆಯ ಮಂಜುಳ, ಸೋಮವಾರಪೇಟೆಯ ಶಿವಾನಂದ, ವೀರಾಜಪೇಟೆಯ ಸುರೇಶ್, ಕೂಡ್ಲೂರು ವೈ.ಟಿ. ಪರಮೇಶ್, ಕರಿಯಪ್ಪ, ಕೆ.ಆರ್. ಚಂದ್ರು ಮೊದಲಾದವರಿದ್ದರು.