ವೀರಾಜಪೇಟೆ, ಡಿ. ೯: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಗರಿಕ ಸಮಿತಿ ವತಿಯಿಂದ ತಾ. ೧೪ ರಂದು ಪುರಸಭೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗರಿಕ ಸಮಿತಿಯ ಸಂಚಾಲಕ ಡಾ. ಇ.ಆರ್. ದುರ್ಗಾ ಪ್ರಸಾದ್ ಅವರು, ನಗರದ ಚಿಕ್ಕಪೇಟೆಯಲ್ಲಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣವು ಕೋಟಿ ರೂಪಾಯಿ ವೆಚ್ಚವಾಗಿದೆ. ಇದರ ನಿರ್ವಹಣೆಯನ್ನು ಪುರಸಭೆಯು ಖಾಸಗಿ ವ್ಯಕ್ತಿಗಳಿಗೆ ನೀಡಿರುವುದು ಹಣ ಮಾಡುವ ಉದ್ದೇಶದಿಂದಾಗಿದೆ ಎಂದು ಆರೋಪಿಸಿದ ಅವರು, ಒಳಾಂಗಣ ಕ್ರೀಡಾಂಗಣವನ್ನು ಖಾಸಗಿ ವ್ಯಕ್ತಿಗಳಿಗೆ ನೀಡದೆ ಪುರಸಭೆಯು ನಿರ್ವಹಣೆ ಹೊಣೆಯನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿರುವ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಪುರಸಭೆಯ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಸಂಘ-ಸAಸ್ಥೆಗಳು, ಸಾರ್ವಜನಿಕರು ಪ್ರತಿಭಟನೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ನಾಗರಿಕ ಸಮಿತಿಯ ಸಹ ಸಂಚಾಲಕರಾದ ವಕೀಲ ಸೋಮ ಲೋಕಾನಾಥ್ ಮಾತನಾಡಿ, ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿರುವುದಿಲ್ಲ. ರಸ್ತೆಗಳಲ್ಲಿ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ಅಪಘಾತಕ್ಕೆ ಅಹ್ವಾನ ನೀಡುವಂತಾಗಿದೆ. ಪುರಸಭೆಯು ರಸ್ತೆ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲದೆ ಒಳಚರಂಡಿ ಸಮರ್ಪಕವಾಗಿಲ್ಲ ಎಂದು ದೂರಿದರು.

ಸಮಿತಿ ಸದಸ್ಯರಾದ ಪಿ.ಕೆ. ಅಬ್ದುಲ್ ರೇಹಮಾನ್ ಮಾತನಾಡಿ, ನಗರದಲ್ಲಿ ಸರಬರಾಜಾಗುತ್ತಿರುವ ನೀರು ಶುದ್ಧವಾಗಿಲ್ಲ. ಇದರಿಂದ ಅನಾರೋಗ್ಯ ಉಲ್ಬಣಿಸುತ್ತಿದೆ. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಅಬ್ದುಲ್ ಶರೀಫ್ ಮತ್ತು ಅಶೋಕ್ ಉಪಸ್ಥಿತರಿದ್ದರು.