ಕರಿಕೆ, ಡಿ. ೯: ಕರ್ನಾಟಕ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸರಕಾರಿ ಜಮೀನುಗಳನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡಿ ಕೊಂಡಿರುವ ರೈತ ಭೂಮಿಯನ್ನು ಸಕ್ರಮ ಗೊಳಿಸುವ ಯೋಜನೆಯಡಿ ಯಲ್ಲಿ ಮತ್ತು ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಕರಿಕೆಯಲ್ಲಿ ನಡೆಯಿತು.
ಇಲ್ಲಿನ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮಕ್ಕೆ ಶಾಸಕರು ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಉಪಸ್ಥಿತಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಮಡಿಕೇರಿ ತಾಲೂಕಿನ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಸುಮಾರು ೧೪೫ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು.
ನಂತರ ಮಾತನಾಡಿದ ಶಾಸಕರು, ಅರಣ್ಯ ಹಾಗೂ ಕಂದಾಯ ಇಲಾಖೆ ನಡುವಿನ ಹೊಂದಾಣಿಕೆ ಕೊರತೆಯಿಂದ ಇಷ್ಟು ವರ್ಷಗಳ ಕಾಲ ಕರಿಕೆ ವ್ಯಾಪ್ತಿಯಲ್ಲಿ ಹಕ್ಕುಪತ್ರ ನೀಡಲು ಅಡಚಣೆ ಉಂಟಾಗಿತ್ತು. ಈ ಎಲ್ಲಾ ಗೊಂದಲ ವನ್ನು ನಿವಾರಣೆ ಮಾಡಿ ಅಧ್ಯಕ್ಷ ನಾಗೇಶ್ ಅವರ ನೇತೃತ್ವದಲ್ಲಿ ನೂರಾರು ಮಂದಿಗೆ ಹಕ್ಕುಪತ್ರ ವಿತರಿಸಲಾಗುತ್ತಿದ್ದು, ಅಕ್ರಮ ಸಕ್ರಮ ಸಮಿತಿಯಡಿಯಲ್ಲಿ ನಮೂನೆ ನಂ. ೫೦ ರಲ್ಲಿ ೧೭೩ ಮಂದಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ೧೬೨ ಮಂದಿಗೆ ಮಂಜೂರಾತಿ ನೀಡಲಾಗಿದೆ. ನಮೂನೆ ೫೩ ರಲ್ಲಿ ೫೧೮ ಅರ್ಜಿಗಳಲ್ಲಿ ೩೮೬ ಮಂದಿ ಫಲಾನು ಭವಿಗಳಿಗೆ ಸಮಿತಿ ಮಂಜೂರಾತಿ ನೀಡಿ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಿದೆ.
ಗಡಿಯಲ್ಲಿ ಕನ್ನಡ ಭವನದ ಕೊರತೆಯಿದ್ದು ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಜಿಲ್ಲಾಡಳಿತತದಿಂದ ಸೂಕ್ತ ಜಾಗ ಗುರುತಿಸಿ ಕನ್ನಡ ಭವನ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದರಲ್ಲದೇ, ಗಡಿ ಗ್ರಾಮಗಳಲ್ಲಿ ತಮ್ಮ ಮಾತೃ ಭಾಷೆಯನ್ನು ಗೌರವಿಸುತ್ತಾ ತಾವು ವಾಸಿಸುವ ಗ್ರಾಮದ ಮಣ್ಣಿನ ಭಾಷೆಯನ್ನು ಪ್ರತಿ ಯೊಬ್ಬರೂ ಕಲಿತು ವ್ಯವಹರಿಸು ವಂತಾಗಬೇಕೆAದರು. ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮಾತನಾಡಿ, ಕರಿಕೆ ಗ್ರಾಮದ ಸಮಸ್ಯೆಗಳ ಬಗ್ಗೆ ಅರಿವಿದ್ದು ಸರಕಾರದ ಮಹತ್ವದ ಕಾರ್ಯಕ್ರಮ ಗಳಲ್ಲೊಂದಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯೆಡೆಗೆ ಕಾರ್ಯಕ್ರಮವನ್ನು ಗ್ರಾಮದಲ್ಲಿ ಹಮ್ಮಿಕೊಂಡು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದೆಂದರು. ಜಿಲ್ಲಾ ಗಿರಿಜನ ಸಮನ್ವಯ ಅಧಿಕಾರಿ ಹೊನ್ನೆಗೌಡರು ಮಾತನಾಡಿ, ತಮ್ಮ ಇಲಾಖೆಯಿಂದ ಪರಿಶಿಷ್ಟ ಜಾತಿಯ ೧೯ ಫಲಾನುಭವಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಹಕ್ಕುಪತ್ರ ವಿತರಿಸಲಾಗಿದ್ದು, ಇದಲ್ಲದೆ ಇಲಾಖೆಯ ಇತರ ವೈಯಕ್ತಿಕ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ನೂತನ ಆಶ್ರಮ ಶಾಲೆಗೆ ಐದು ಎಕರೆ ಜಮೀನು ಮಂಜೂರಾತಿ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಗಳು ಗಿರಿಜನ ಸಮನ್ವಯ ಅಧಿಕಾರಿಗಳಿಗೆ ಶಾಸಕರ ಸಮ್ಮುಖದಲ್ಲಿ ಹಸ್ತಾಂತರ ಮಾಡಿದರು.
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಕಂದಾಯ ಹಾಗೂ ಅರಣ್ಯ ಇಲಾಖೆಯ ನಡುವಿನ ಗಡಿ ಸಮಸ್ಯೆಯನ್ನು ಶಾಸಕರ ಸಹಕಾರದಿಂದ ಸಭೆ ನಡೆಸಿ ಹಿರಿಯ ಅರಣ್ಯ ಅಧಿಕಾರಿಗಳ ಸಹಕಾರದಿಂದ ಈ ಭಾಗದಲ್ಲಿ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದರು. ಗ್ರಾಮದಲ್ಲಿ ೩೬ ವರ್ಷಗಳಿಂದ ಕೇರಳ ದಿಂದ ವಲಸೆ ಬಂದು ವಾಸವಿದ್ದರೂ ಇನ್ನೂ ಕನಿಷ್ಟ ವ್ಯವಹಾರಕ್ಕೆ ಕನ್ನಡ ಮಾತನಾಡಲು ಬಾರದಿರುವುದು ದುರದೃಷ್ಟಕರವೆಂದರಲ್ಲದೆ, ಎಲ್ಲರೂ ಕನ್ನಡ ಕಲಿಯುವಂತಾಗಬೇಕೆAದರು. ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಬಾಲಕೃಷ್ಣ ರೈ, ಉಪ ತಹಶೀಲ್ದಾರ್ ದೊರೆ, ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ಜಗದೀಶ್, ಅಕ್ರಮ ಸಕ್ರಮ ಸದಸ್ಯರಾದ ಸುಬ್ರಮಣ್ಯ ಉಪಾಧ್ಯಾಯ, ಕವಿತಾ ಪ್ರಭಾಕರ, ಮಿಟ್ಟು ರಂಜಿತ್, ಪಂಚಾಯಿತಿ ಉಪಾಧ್ಯಕ್ಷ ಬಾಲಚಂದ್ರ ನಾಯರ್, ಭಾಗಮಂಡಲ ವಲಯ ಅರಣ್ಯ ಅಧಿಕಾರಿ ರವೀಂದ್ರ, ಉಪವಲಯ ಅರಣ್ಯ ಅಧಿಕಾರಿ ಸಚಿನ್ ಬಿರಾದಾರ, ಕಂದಾಯ ನಿರೀಕ್ಷಕ ಅನೂಪ್, ಸದಾಶಿವ, ಗ್ರಾಮ ಕಂದಾಯ ಅಧಿಕಾರಿಗಳಾದ ರಮೇಶ್ ಜಟ್ಟಪ್ಪ ಸೇರಿದಂತೆ ಇತರ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ನೂರಾರು ಫಲಾನುಭವಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ತಹಶಿಲ್ದಾರ್ ಮಹೇಶ್ ಸ್ವಾಗತಿಸಿ, ವಂದಿಸಿದರು.
- ಸುಧೀರ್ ಹೊದ್ದೆಟ್ಟಿ