ಮಡಿಕೇರಿ, ಡಿ. ೯: ದೇಶದ ಅಗ್ರಗಣ್ಯ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಕೃಷಿಕರಲ್ಲಿ ಮಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ವಿಶ್ವ ಮಣ್ಣು ದಿನಾಚರಣೆ’ ಕಾರ್ಯಕ್ರಮ ಮಡಿಕೇರಿಯ ಹೊಟೇಲ್ ಕೂರ್ಗ್ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೊಡಗು ಪ್ಲಾಂರ‍್ಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಪಾಲಿಬೆಟ್ಟದ ಟಾಟಾ ಕಾಫಿ ಲಿಮಿಟೆಡ್‌ನ ಜನರಲ್ ಮೇನೇಜರ್ ಸಿ.ಯು. ಅಶೋಕ್, ಅಪ್ಪಂಗಳದ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರು ಹಾಗೂ ಮುಖ್ಯಸ್ಥರಾದ ಎಸ್.ಜೆ. ಅಂಕೇಗೌಡ, ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದ ವಿಜ್ಞಾನಿಗಳಾದ ಡಾ. ಮಂಜುನಾಥ್ ರೆಡ್ಡಿ, ಡಾ, ಮುರುಳಿಧರ್, ಭಾರತೀಯ ಸ್ಟೇಟ್ ಬ್ಯಾಂಕ್‌ನ ಮಂಗಳೂರು ವಿಭಾಗೀಯ ಡೆಪ್ಯುಟಿ ಜನರಲ್ ಮೇನೇಜರ್ ಜೋಬಿ ಜೋಸ್, ಪ್ರಾದೇಶಿಕ ವ್ಯವಸ್ಥಾಪಕ ಎಂ. ಏಡುಕೊಂಡಲು, ಮಡಿಕೇರಿ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಭಾಮಿನಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು. ಭಾರತ ಸರಕಾರವು ಹೊಸದಾಗಿ ಘೋಷಿಸಿರುವ ಕೃಷಿ ಮೂಲಭೂತÀ ಸೌಕರ್ಯ ನಿಧಿ ಅಡಿಯಲ್ಲಿ ದೊರಕುವ ಹಣಕಾಸು ಸೌಲಭ್ಯ ಹಾಗೂ ಕೃಷಿಕರಿಗೆ ಮತ್ತು ಬ್ಯಾಂಕ್‌ನ ಇತರ ಗ್ರಾಹಕರಿಗೆ ದೊರಕುವ ಇತರ ಸಾಲ ಸೌಲಭ್ಯಗಳ ಕುರಿತು ಎಸ್‌ಬಿಐನ ಅಧಿಕಾರಿಗಳು ಮಾಹಿತಿ ನೀಡಿದರು.

ಮಣ್ಣಿನ ಫಲವತ್ತತೆ ಸಂರಕ್ಷಣೆ ಕುರಿತು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರ ಹಾಗೂ ಮಡಿಕೇರಿಯ ಬಳಿಯ ಅಪ್ಪಂಗಳದ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಹಿರಿಯ ಗ್ರಾಹಕರು ಹಾಗೂ ಕಾಫಿ ಮಂಡಳಿಯ ಮಾಜಿ ಅಧ್ಯಕ್ಷ ಬೋಸ್ ಮಂದಣ್ಣ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.