ಸಿದ್ದಾಪುರ, ಡಿ. ೮: ನೆಲ್ಲಿಹುದಿ ಕೇರಿ ಗ್ರಾ.ಪಂ. ಕಾರ್ಯಾಲಯದ ವಿದ್ಯುತ್ ಬಿಲ್ಲನ್ನು ಕೂಡಲೇ ಪಾವತಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನೆಲ್ಲಿಹುದಿಕೇರಿ ಸಿ.ಪಿ.ಐ. (ಎಂ) ಪಕ್ಷದ ವತಿಯಿಂದ ಪ್ರತಿಭಟನೆ ಯನ್ನು ಹಮ್ಮಿಕೊಂಡಿರುವುದಾಗಿ ಸಿಪಿಐ. (ಎಂ) ಪಕ್ಷದ ಮುಖಂಡ ಪಿ.ಆರ್. ಭರತ್ ತಿಳಿಸಿದರು. ಪಕ್ಷದ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಲಿಹುದಿಕೇರಿ ಗ್ರಾ.ಪಂ.ಯ ಆಡಳಿತ ಮಂಡಳಿ ರೂ. ೨೦ ಲಕ್ಷ ವೆಚ್ಚದಲ್ಲಿ ಗ್ರಾ.ಪಂ.ಯ ಕಚೇರಿಯ ಕಟ್ಟಡವನ್ನು ಹೈಟೆಕ್ ಆಗಿ ನಿರ್ಮಾಣ ಮಾಡಿದೆ. ಆದರೆ ಪಂಚಾಯಿತಿ ಕಟ್ಟಡದ ವಿದ್ಯುತ್ ಬಿಲ್ ರೂ. ೧೬ ಲಕ್ಷಕ್ಕೂ ಅಧಿಕ ಹಣವನ್ನು ಪಾವತಿಸದೇ ನಿರ್ಲಕ್ಷö್ಯ ವಹಿಸುತ್ತಿದ್ದು, ಇದೀಗ ಪಂಚಾಯಿತಿ ಕಚೇರಿಯಲ್ಲಿ ವಿದ್ಯುತ್ ಕಡಿತಗೊಂಡು ಕತ್ತಲೆ ಆವರಿಸಿದೆ ಎಂದು ತಿಳಿಸಿದರು. ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ೧೦ ಸಾವಿರಕ್ಕೂ ಅಧಿಕ ಮಂದಿ ವಾಸವಿದ್ದು, ಇವರಿಗೆ ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲ ಯವಿಲ್ಲದೇ ಸಮಸ್ಯೆಗೆ ಸಿಲುಕಿ ಕೊಂಡಿದ್ದಾರೆ ಎಂದರು. ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕಾರ್ಯರೂಪಕ್ಕೆ ತರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ಬಡ ವರ್ಗದವರು ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರಾಗಿದ್ದು, ಈ ಹಿನ್ನೆಲೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಆಹಾರ ಇಲಾಖಾಧಿಕಾರಿಗಳು ಅದಾಲತ್ ನಡೆಸಬೇಕೆಂದು ಒತ್ತಾಯಿಸಿದರು. ೨೦೧೯ ರಲ್ಲಿ ನಡೆದ ಮಹಾ ಮಳೆಗೆ ಸಿಲುಕಿ ಮನೆ ಕಳೆದುಕೊಂಡ ನದಿ ತೀರದ ಸಂತ್ರಸ್ತರಿಗೆ ಗುರುತಿಸಿದ ಪುನರ್ವಸತಿ ಜಾಗದಲ್ಲಿ ಈವರೆಗೂ ಕಾಮಗಾರಿ ನಡೆಸದೇ ವಿಳಂಬ ನೀತಿ ಅನುಸರಿ ಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಸಿಪಿಐ(ಎಂ) ಪಕ್ಷದ ಪದಾಧಿಕಾರಿ ಗಳಾದ ಎಂ.ಜಿ. ಜೋಸ್, ಮೋಣಪ್ಪ, ವೈ. ರವಿ, ಚಂದ್ರನ್ ಹಾಜರಿದ್ದರು.