ಮುಳ್ಳೂರು, ಡಿ. ೮: ರೈತರು ತೋಟದ ಬೆಳೆಗಳ ಬೇಸಾಯ ಕ್ರಮಗಳ ಕುರಿತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದುಕೊಳ್ಳುವ ಮೂಲಕ ಬೇಸಾಯ ಮಾಡಿದರೆ ತೋಟದ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಮತ್ತು ಲಾಭಗಳಿಸಬಹುದು ಎಂದು ಸೋಮವಾರಪೇಟೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯ ಸಂಪನ್ಮೂಲ ವ್ಯಕ್ತಿ ಡಾ. ವೀರೇಂದ್ರಕುಮಾರ್ ಹೇಳಿದರು.

ಅವರು ಸೋಮವಾರ ಸಮೀಪದ ಬೆಸೂರು ಗ್ರಾಮದ ಹಾಲು ಉತ್ಪಾದಕರ ಸಂಘದ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ವತಿಯಿಂದ ರೈತರಿಗೆ ಹಮ್ಮಿಕೊಂಡಿದ್ದ ೨೦೨೨-೨೩ನೇ ಸಾಲಿನ ಜಿಲ್ಲಾ ಪಂಚಾಯಿತಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಬೇಸಾಯ ಕ್ರಮಗಳು ಮತ್ತು ಸಸ್ಯ ಸಂರಕ್ಷಣೆ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ರೈತರು ತೋಟದ ಬೆಳೆಗಳ ಬಗ್ಗೆ ವೈಜ್ಞಾನಿಕ ಕ್ರಮ, ಔಷಧಿ ಸಿಂಪಡಣೆ ಕ್ರಮ ಸೇರಿದಂತೆ ವಿವಿಧ ತೋಟದ ಬೆಳೆಗಳ ನಿರ್ವಹಣೆ, ರೋಗ ಹತೋಟಿ ಮುಂತಾದವುಗಳ ಬಗ್ಗೆ ಹತ್ತಿರದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಂದ ಸೂಕ್ತ ಸಲಹೆ ಪಡೆದುಕೊಂಡು ಅದರಂತೆ ಬೇಸಾಯ ಕ್ರಮ ಅನುಸರಿಸಿದಲ್ಲಿ ತೋಟದ ಬೆಳೆಗಳಲ್ಲಿ ಹೆಚ್ಚಿನ ಇಳುವರಿಯ ಜೊತೆಯಲ್ಲಿ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದರು. ರೈತರಿಗೆ ಸರಕಾರ ಮತ್ತು ತೋಟಗಾರಿಕೆ ಇಲಾಖೆ ಕಾಫಿ ಸೇರಿದಂತೆ ತೆಂಗು, ಅಡಿಕೆ, ಬಾಳೆ ಇನ್ನು ಮುಂತಾದ ತೋಟದ ಬೆಳೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಲವು ಸೇವೆ ಸೌಲಭ್ಯಗಳನ್ನು ನೀಡುತ್ತಿರುವುದರ ಜೊತೆಯಲ್ಲಿ ರೈತರಿಗೆ ಮಾಹಿತಿ, ವಿಚಾರ ಸಂಕಿರಣಗಳನ್ನು ಆಯೋಜನೆ ಮಾಡುತ್ತಿದ್ದು ಈ ನಿಟ್ಟಿನಲ್ಲಿ ರೈತರು ಯೋಜನೆಯನ್ನು ಸದುಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಬೆಸೂರು ಗ್ರಾ.ಪಂ. ಅಧ್ಯಕ್ಷೆ ಎಂ.ಎ. ಸವಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯ ರಾದ ರವಿ, ಕಿಶಾನ್ ಉಪಸ್ಥಿತ ರಿದ್ದು ವಿಚಾರ ಸಂಕಿರಣದಲ್ಲಿ ಕೊಡ್ಲಿಪೇಟೆ ತೋಟಗಾರಿಕೆ ಇಲಾಖೆ ಅಧಿಕಾರಿ ಈಶ್ವರ್ ಕಲ್ಯಾಣಿ, ಕುಶಾಲನಗರ ಸಹಾಯಕ ತೋಟಗಾರಿಕೆ ಅಧಿಕಾರಿ ಎಂ.ವಿ. ಕಾವ್ಯ, ಜೇನು ಕೃಷಿ ಸಹಾಯಕ ಅಧಿಕಾರಿ ಎಸ್.ಎಸ್. ರಾಜು, ಸಹಾಯಕ ತೋಟಗಾರಿಕೆ ಅಧಿಕಾರಿ ಎಸ್.ಎ. ಶಿವಕುಮಾರ್ ಮತ್ತು ಮಹೇಶ್ ರೂಣಿ ಹಾಜರಿದ್ದರು.