ಭಾಗಮಂಡಲ, ಡಿ. ೮: ಹುತ್ತರಿ ಹಬ್ಬದ ಮರುದಿನವಾದ ಗುರುವಾರದಂದು ಭಾಗಮಂಡಲದ ಕಾವೇರಿ ಕೋಲ್ ಮಂದ್‌ನಲ್ಲಿ (ಕಾವೇರಿ ಹಿರಿಯ ಮಾನಿಮಂದ್) ನಾಲ್ಕು ಗ್ರಾಮದವರಿಂದ ಹುತ್ತರಿಕೋಲು ಸಂಭ್ರಮದಿAದ ನಡೆಯಿತು.

ಭಾಗಮಂಡಲದ ತಾವೂರು ಗ್ರಾಮದ ಮಹಿಷಾಸುರ ಮರ್ದಿನಿ ದೇವಾಲಯದ ತಕ್ಕರಾದ ಕುರುಂಜಿ ದೇವಯ್ಯ ಅವರ ನೇತೃತ್ವದಲ್ಲಿ ದೇವಾಲಯದಲ್ಲಿ ಹುತ್ತರಿಕೋಲು ನಡೆದರೆ, ಚೇರಂಗಾಲ ಗ್ರಾಮದ ಸಿರಕಜೆ ಸುಂದರ ಅವರ ನೇತೃತ್ವದಲ್ಲಿ ಅಲ್ಲಿನ ಈಶ್ವರ ಭಗವತಿ ದೇವಾಲಯದ ಆವರಣದಲ್ಲಿ ಹುತ್ತರಿ ಕೋಲು ನಡೆಯಿತು. ತಣ್ಣಿಮಾನಿ ಭಗವತಿ ದೇವಾಲಯದ ತಕ್ಕರಾದ ದಂಡಿನ ರಮೇಶ್ ಅವರ ನೇತೃತ್ವದಲ್ಲಿ ಹುತ್ತರಿಕೋಲು ನಡೆದರೆ ಕೋರಂಗಾಲ ಗ್ರಾಮದ ಸುಬ್ರಹ್ಮಣ್ಯ ದೇವಾಲಯದ ನಂಗಾರು ವಿಜಯ ನೇತೃತ್ವದಲ್ಲಿ ಹುತ್ತರಿಕೋಲು ನಡೆದು ಬಳಿಕ ಭಾಗಮಂಡಲಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಒಟ್ಟು ಸೇರಿ ಭಗಂಡೇಶ್ವರ ದೇವಾಲಯಕ್ಕೆ ತೆರಳಿದರು. ಅಲ್ಲಿ ಗಂಧ ಪ್ರಸಾದ ಸ್ವೀಕರಿಸಿ ಕಾವೇರಿ ಮಾನಿ ಮಂದ್‌ಗೆ ವಾದ್ಯಗೋಷ್ಠಿಯೊಂದಿಗೆ ತೆರಳಿದರು. ಅಲ್ಲಿ ಭಾಗಮಂಡಲದ ನಾಡ ತಕ್ಕರಾದ ನಂಗಾರು ಮತ್ತು ಬಾರಿಕೆ ಕುಟುಂಬಸ್ಥರು, ದೇಶ ತಕ್ಕರಾದ ಕುದುಪಜೆ ಮತ್ತು ಸೂರ್ತಲೆ ಕುಟುಂಬಸ್ಥರನ್ನು ನೀರು, ಫಲತಾಂಬುಲ, ಚಾಪೆಗಳನ್ನು ನೀಡಿ ಕಾವೇರಿ ಹಿರಿಯ ಮಾನಿಮಂದ್‌ಗೆ ಬರಮಾಡಿಕೊಂಡರು. ಬಳಿಕ ಮಂದ್ ನಲ್ಲಿ ಈಡು ತೆಗೆದು ಮೂರು ಸುತ್ತಿನ ಕೋಲು ನಡೆಯಿತು. ನಂತರ ದೇಶ ತಕ್ಕರಿಗೆ ಕೋಲನ್ನು ನೀಡಿ ೮ ಸುತ್ತಿನ ಆಟಗಳನ್ನು ಆಡಿ ತೋರಿಸುವಂತೆ ಕೋರಿಕೊಂಡರು. ಬಳಿಕ ೮ ಸುತ್ತಿನ ಕೋಲು ನಡೆದು ಭಾಗಮಂಡಲ ದೇವಾಲಯಕ್ಕೆ ಹಿಂತಿರುಗಿ ಕೋಲು ಒಪ್ಪಿಸಲಾಯಿತು.

ತಣ್ಣಿಮಾನಿ ಗ್ರಾಮದ ಭಗವತಿ ದೇವಾಲಯದಲ್ಲಿ ತಾ. ೯ರಂದು (ಇಂದು) ಹುತ್ತರಿ ಕೋಲು ನಡೆದು ಅಲ್ಲಿಯೇ ಕೋಲು ಒಪ್ಪಿಸುವ ಕ್ರಮ ನಡೆಯಲಿದೆ.

-ಸುನಿಲ್ ಕುಯ್ಯಮುಡಿ