ಮಡಿಕೇರಿ, ಡಿ. ೮: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿನ ಕೋಟೆ ಆವರಣದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಪುತ್ತರಿ ಕೋಲಾಟ್ ಕಾರ್ಯಕ್ರಮ ಹಬ್ಬದ ಮರುದಿನವಾದ ಇಂದು ಜರುಗಿತು. ಕೋಟೆಯಲ್ಲಿ ಹಿಂದಿನ ಕಾಲದಿಂದಲೂ ವಿಶೇಷವಾಗಿ ಜರುಗುತ್ತಿದ್ದು ನಂತರದಲ್ಲಿ ಗದ್ದುಗೆ ಆವರಣಕ್ಕೆ ಸ್ಥಳಾಂತರಗೊAಡಿದ್ದ ಪುತ್ತರಿ ಕೋಲಾಟ್ ಕಳೆದ ಕೆಲವು ವರ್ಷಗಳಿಂದ ಮತ್ತೆ ಕೋಟೆಯಲ್ಲೇ ಆಯೋಜಿತವಾಗುತ್ತಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯದತ್ತಿಗಳ ಇಲಾಖೆ, ಶ್ರೀ ಓಂಕಾರೇಶ್ವರ ದೇವಾಲಯ, ಮಡಿಕೇರಿ ನಾಡ್‌ನ ದೇವ ತಕ್ಕರಾದ ಪಾಂಡಿರ ಕುಟುಂಬಸ್ಥರು ಮತ್ತು ಮಡಿಕೇರಿ ಕೊಡವ ಸಮಾಜದ ಮೂಲಕ ಕದಿರು ತೆಗೆದ ದಿನದ ಮರುದಿನದಂದು ಈ ಕಾರ್ಯಕ್ರಮ ಜರುಗುವುದು ವಾಡಿಕೆಯಾಗಿದೆ. ಇದರಂತೆ ಇಂದು ಇಲ್ಲಿ ಹಬ್ಬದ ಸಂಭ್ರಮವನ್ನು ಜಾನಪದ ಕಲೆಗಳ ಪ್ರದರ್ಶನದೊಂದಿಗೆ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೋಟೆಯಲ್ಲಿನ ಈ ಕಾರ್ಯಕ್ರಮಕ್ಕೆ ಅದರದ್ದೇ ಆದ ಐತಿಹ್ಯವಿದ್ದು, ಇದು ಈ ಆವರಣದಲ್ಲೇ ಮುಂದುವರಿಯುವAತಾಗಬೇಕೆAದರು.

ಅತಿಥಿಗಳಾಗಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರು ಮಾತನಾಡಿ ಹೊಸ ಜೀವನ ಕ್ರಮದ ನಡುವೆ ಹಿಂದಿನ ಕಾಲದ ಸಾಂಪ್ರದಾಯಿಕ ಆಚಾರ-ವಿಚಾರಗಳನ್ನು ಪರಿಪಾಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ದೇಶ ತಕ್ಕರಾದ ಪಾಂಡಿರ ಕುಟುಂಬದ ಪ್ರಮುಖರಾದ ಸಜನ್ ಪೂಣಚ್ಚ, ಮೇದಪ್ಪ, ರವಿ ಕರುಂಬಯ್ಯ, ಮುತ್ತಣ್ಣ, ಓಂಕಾರೇಶ್ವರ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಕಾರ್ಯನಿರ್ವಹಣಾಧಿಕಾರಿ ದೇವರಾಜ್, ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ಕೇಕಡ ವಿಜು ದೇವಯ್ಯ, ಜಿಲ್ಲಾಧಿಕಾರಿಗಳ ಪತ್ನಿ ರೂಪಾ ಸತೀಶ್, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಮತ್ತಿತರರು ಈ ಸಂದರ್ಭ ಪಾಲ್ಗೊಂಡಿದ್ದರು.

ಜನಪದ ಪ್ರದರ್ಶನ

ಪಾಂಡಿರ ಕುಟುಂಬಸ್ಥರು ಹಾಗೂ ಮಡಿಕೇರಿ ಕೊಡವ ಸಮಾಜದಿಂದ ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ತಾಲಿಪಾಟ್‌ನಂತಹ ಜನಪದ ಕಲೆಗಳ ಪ್ರದರ್ಶನ ಹಾಗೂ ಕೊನೆಯಲ್ಲಿ ಸಾಮೂಹಿಕ ವಾಲಗತಾಟ್ ನಡೆಯಿತು.

ಪಾಂಡಿರ ನಿರೀಕ್ಷಾ ಬೊಳ್ಳಮ್ಮ ಪ್ರಾರ್ಥಿಸಿ, ಕೇಕಡ ವಿಜು ದೇವಯ್ಯ ಸ್ವಾಗತಿಸಿದರು. ಶಿಕ್ಷಕಿ ಚೋಕಿರ ಅನಿತಾ ದೇವಯ್ಯ ನಿರೂಪಿಸಿದರು. ಮುಳಿಯ ಸಂಸ್ಥೆಯವರು ಫಲಾಹಾರದ ವ್ಯವಸ್ಥೆ ಕಲ್ಪಿಸಿದ್ದರು.