ವೀರಾಜಪೇಟೆ, ಡಿ. ೬: ವೀರಾಜಪೇಟೆ ಕೊಡವ ಸಮಾಜದಲ್ಲಿಂದು ದಿನವಿಡೀ ವಾಲಗದ ನಿನಾದದ ವಿಶೇಷ ರೀತಿಯ ಸಂಭ್ರಮ ಮನೆ ಮಾಡಿತ್ತು. ಸಮಾಜದಲ್ಲಿ ಮದುವೆಯಂತಹ ಶುಭಕಾರ್ಯಗಳು ಸಹಜವಾಗಿದ್ದರೂ, ಇಂದಿನದ್ದು ವಿಭಿನ್ನ ರೀತಿಯದ್ದು. ಕೊಡವ ವಾಲಗತಾಟ್ ಅನ್ನು ಸ್ಪರ್ಧೆಯಾಗಿ ಆಯೋಜಿಸಿ ವಾಲಗತಾಟ್ ನಮ್ಮೆ -೨೦೨೨ ಎಂಬುದಾಗಿ ಆಯೋಜನೆ ಮಾಡಿದ್ದು, ಮಕ್ಕಳು, ಪುರುಷರು, ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಏರ್ಪಡಿಸಲಾಗಿದ್ದು, ಪ್ರಥಮ ಪ್ರಯತ್ನದ ವಾಲಗತಾಟ್ ನಮ್ಮೆ ಯಶಸ್ಸು ಕಂಡಿತು. ತೂಕ್‌ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ, ವೀರಾಜಪೇಟೆ ಕೊಡವ ಸಮಾಜದ ಸಹಕಾರ ಹಾಗೂ ಇನ್ನಿತರ ಕೆಲವು ಸಂಘಟನೆಗಳ ಬೆಂಬಲದೊAದಿಗೆ ಈ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಸಾಂಪ್ರದಾಯಿಕ ರೀತಿಯ ವಾಲಗದ ವಿವಿಧ ಪ್ರಾಕಾರಗಳಿಗೆ ಸ್ಪರ್ಧಿಗಳು ಹೆಜ್ಜೆ ಹಾಕಿ ಗಮನ ಸೆಳೆದರು.

ಪ್ರೋತ್ಸಾಹ ಅಗತ್ಯ : ವೀಣಾ ಅಚ್ಚಯ್ಯ

ಕೊಡವ ಸಂಸ್ಕೃತಿಯ ಆಚಾರ-ವಿಚಾರ, ಪದ್ಧತಿ-ಪರಂಪರೆಗಳನ್ನು ಯುವ ಪೀಳಿಗೆಗೆ ಪರಿಚಯಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ. ಕೊಡವ ವಾಲಗ ಕಿವಿಗೆ ಕೇಳಿದ ತಕ್ಷಣ ಕಾಲುಗಳು ತನ್ನಿಂದ ತಾನೇ ಅಲುಗಾಡುತ್ತದೆ ಇದು ನಮ್ಮ ರಕ್ತದಲ್ಲಿಯೇ ಅಡಕವಾಗಿದೆ ಎಂದು ವಿಧಾನ ಪರಿಷತ್ತ್ನ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಹೇಳಿದರು.

ಕೊಡವ ವಾಲಗತಾಟ್ ನಮ್ಮೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡವ ಸಂಸ್ಕೃತಿಯಲ್ಲಿ ವಾಲಗತಾಟ್ ಕೂಡ ಆಚರಣೆಯ ಒಂದು ಭಾಗ ಆಗಿದೆ. ಈ ವಾಲಗತಾಟ್ ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ. ಕೊಡವರ ಪ್ರತಿಯೊಂದು ಕಾರ್ಯದಲ್ಲೂ ವಾಲಗ ನುಡಿಸುವವರ ಅವಶ್ಯಕತೆ ಬಹಳ ಇದ್ದು, ಪ್ರತಿ ಊರಿನಲ್ಲಿ ಇರುವವರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ವಾಲಗ ನುಡಿಸುವವರ ಸಂಖ್ಯೆ ಕ್ಷೀಣವಾದರೆ ಮುಂದಿನ ದಿನಗಳಲ್ಲಿ ಧ್ವನಿ ಸುರುಳಿಯ ಮೂಲಕ ಎಲ್ಲಾ ಕಾರ್ಯಗಳನ್ನು ನಡೆಸಬೇಕಾಗುತ್ತದೆ. ಕೊಡವ ಸಾಹಿತ್ಯ ಅಕಾಡೆಮಿಯವರು ಇಂತಹವರನ್ನು ಗುರುತಿಸಿ ಅವರಿಗೆ ಬೇಕಾದ ಸಲಕರಣೆಗಳನ್ನು ಒದಗಿಸಿ ಕೊಡುವಂತೆ ಸಲಹೆ ನೀಡಿದರು.

ಬೆಂಗಳೂರು ಕೊಡವ ಸಮಾಜದ ಮಹಿಳಾ ವಿಂಗ್‌ನ ಅಧ್ಯಕ್ಷೆ ತೀತೀರ ಶರ್ಮೀಲಿ ಅಪ್ಪಚ್ಚು ಮಾತನಾಡಿ ನಾವು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಿದರೆ ಇಂತಹ ವಿಶಿಷ್ಟ ಕೊಡವ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಹಕಾರಿಯಾಗುತ್ತದೆ. ಇತ್ತೀಚೆಗೆ ಬೆಂಗಳೂರಿನ ಕೊಡವ ಸಮಾಜದಿಂದ ವಿಧಾನ ಸೌಧದವರೆಗೆ ಕೊಡವತಿ ಸೀರೆಯಲ್ಲಿನ ನಡಿಗೆ ಅಭೂತಪೂರ್ವ ಯಶಸ್ಸನ್ನು ಕಂಡಿತು. ಇತರ ಜನಾಂಗದವರು ನಮ್ಮ ಸೀರೆಯ ವೈಶಿಷ್ಟö್ಯತೆಯನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು ಎಂದು ಹೇಳಿದರು.

ಡಾ|| ಚೇಂದಿರ ಬೋಪಣ್ಣ ಮಾತನಾಡಿ ಹೊರ ಜಿಲ್ಲೆಯಲ್ಲಿ ಕೊಡವರ ಸಂಸ್ಕೃತಿ ಎಂದರೆ ಕೇವಲ ತಿಂದು ಕುಡಿದು ಕುಪ್ಪಳಿಸುವುದು ಮಾತ್ರ ಎಂಬ ಭಾವನೆ ಕೆಲವರಲ್ಲಿ ಇದೆ. ಆದರೆ ನಮ್ಮ ಮೂಲ ಸಂಸ್ಕೃತಿ ಏನು ಎಂಬುದರ ಬಗ್ಗೆ ಅರಿತುಕೊಳ್ಳಲು ಅವರಲ್ಲಿ ಆಸಕ್ತಿ ಇಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಕೊಡವರ ಮೂಲ ಸಂಸ್ಕೃತಿಯನ್ನು ಬಿಂಬಿಸಲು ಸಹಕಾರಿ ಆಗುವುದಲ್ಲದೆ ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ ಕೊಡವ ವಾಲಗತಾಟ್ ಶ್ರೀಮಂತ ಪರಂಪರೆಯನ್ನು ಬಿಂಬಿಸುತ್ತದೆ. ವಾಲಗತಾಟ್‌ನಲ್ಲಿ ೧೩ ವಿಧಗಳಿದ್ದು, ದೇವರ ಸ್ತುತಿ, ಕೊಡವಾಟ್, ಮಾಪಳೆಯಾಟ್, ಎರವಾಟ್, ಪಾಂಬಾಟ್, ಕುರುಂದಾಟ್, ದೇವಾಟ್, ನರಿವೇಷ, ಬೊಳಕಾಟ್, ಎತ್ತಾಟ್, ಪುತ್ತರಿ ಕೋಲಾಟ್, ತಾಲಿಯಾಟ್, ಕೊಡವಾಟ್(ಆಖಿರಿ). ಇಂತಹ ಹದಿಮೂರು ತರಹದ ಕುಣಿತ ನಮ್ಮಲ್ಲಿ ಇದೆ. ಇಂದಿನ ಯುವ ಪೀಳಿಗೆಗೆ ಇದನ್ನು ಪರಿಚಯಿಸುವ ನಿಟ್ಟಿನಲ್ಲಿ ಕೊಡವ ವಾಲಗತಾಟ್ ನಮ್ಮೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪಸಭೆಯ ಅಧ್ಯಕ್ಷತೆ ವಹಿಸಿ ಯಾವುದೇ ಸಾಹಿತ್ಯ ಸಂಸ್ಕೃತಿ ಇದ್ದರೂ ಕೂಡ ನಮ್ಮ ನಿಲುವನ್ನು ಬಿಡಬಾರದು. ಕೊಡಗಿಗಿಂತ ಹೊರ ಜಿಲ್ಲೆಯಲ್ಲಿ ಹೆಚ್ಚಿನ ಕೊಡವರು ಇದ್ದಾರೆ. ನಮ್ಮ ಸಂಸ್ಕೃತಿ ಆಚಾರ, ವಿಚಾರವನ್ನು ಅಲ್ಲಿ ಬೆಳೆಸಿದರೆ ಸಾಲದು, ಇಲ್ಲಿಯ ನೆಲ, ಜಲವನ್ನು ಉಳಿಸಿ ಸಂಸ್ಕೃತಿಯನ್ನು ಬೆಳೆಸುವಂತಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್, ಕೊಡವ ತಕ್ಕಾಫ್ ಪೈಪೋಟಿಯ ಸ್ಥಾಪಕ ಅಧ್ಯಕ್ಷೆ ಬಲ್ಲಚಂಡ ನೈನಾ, ಕೊಡವ ಕ್ಲಾö್ಯನ್ ಸ್ಥಾಪಕ ಅಧ್ಯಕ್ಷ ಗುಮ್ಮಟ್ಟೀರ ಕಿಶು ಉತ್ತಪ್ಪ ಮತ್ತು ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ ಉಪಸ್ಥಿತರಿದ್ದರು.

ವಾಲಗತಾಟ್ ತೀರ್ಪುಗಾರರಾಗಿ ಕಾಳಿಮಾಡ ಮೋಟಯ್ಯ, ತಾತಂಡ ಪ್ರತಾಪ್ ಬೆಳ್ಳಿಯಪ್ಪ, ತೀತೀಮಾಡ ಬೋಸ್, ಚಿಯಕ್‌ಪೂವಂಡ ದೇವಯ್ಯ ಮತ್ತು ಬೊಟ್ಟೋಳಂಡ ಮಿಟ್ಟು ಪೂಣಚ್ಚ ಕಾರ್ಯ ನಿರ್ವಹಿಸಿದರು.

ಮುಲ್ಲೇಂಗಡ ಮಧೋಶ್ ಪೂವಯ್ಯ ಸ್ವಾಗತಿಸಿ, ಮುಲ್ಲೇಂಗಡ ರೇವತಿ ಪೂವಯ್ಯ ಕಾರ್ಯಕ್ರಮ ನಿರೂಪಿಸಿದರು.

-ಪಾರ್ಥಚಿಣ್ಣಪ್ಪ