ಸುಂಟಿಕೊಪ್ಪ, ಡಿ. ೧: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಗ್ರಾಮದ ಕಾಫಿ ಬೆಳೆಗಾರ ಡಿ.ಹೆಚ್. ಉಮೇಶ್ ರಾಜ್ ಅರಸ್ ಹಾಗೂ ಡಿ.ಹೆಚ್. ವಿಶ್ವನಾಥ ರಾಜ್ ಅವರ ಅರ್ಧ ಎಕರೆ ಜಾಗ ಮಳೆಯಿಂದ ಕೊಚ್ಚಿ ಹೋಗಿದ್ದು ಭಾರೀ ನಷ್ಟವುಂಟಾಗಿದೆ.

ಯಡವನಾಡು ಗ್ರಾಮದ ಡಿ.ಹೆಚ್. ಉಮೇಶ್ ರಾಜ್ ಅರಸು ಸೋಮವಾರಪೇಟೆ, ಕುಶಾಲನಗರ ಹೆದ್ದಾರಿಯ ರಸ್ತೆ ಬದಿಯ ಜಾಗದಲ್ಲಿ ಭತ್ತ ಬೆಳೆಸಿದ್ದರು. ವಿಶ್ವನಾಥ ರಾಜೇ ಅರಸು ಅವರು ಜೋಳ ಬೆಳೆದಿದ್ದರು. ವಿಪರೀತ ಸುರಿದ ಮಳೆಯಿಂದ ಯಡವನಾಡು ಮೀಸಲು ಅರಣ್ಯ ಪ್ರದೇಶದ ಬೆಟ್ಟದಿಂದ ಪ್ರವಾಹ ಕೂಪದಲ್ಲಿ ಬಂದ ನೀರು ಈ ಪ್ರದೇಶಕ್ಕೆ ನುಗ್ಗಿದ್ದು ಅಂದಾಜು ಅರ್ಧ ಎಕರೆ ಜಾಗ ಕೊಚ್ಚಿ ಹೋಗಿ ಕೆಳಭಾಗದ ತೋಡಿಗೆ ಬಿದ್ದಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.

ಅರಣ್ಯ ಮೀಸಲು ಪ್ರದೇಶದಿಂದ ಜನನಿಬಿಡ ಪ್ರದೇಶದಲ್ಲಿ ನೀರು ನುಗ್ಗಿ ಕೃಷಿಕರಿಗೆ ನಷ್ಟವುಂಟಾಗಿರುವುದರ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿದ ಮೇರೆ ಸೋಮವಾರಪೇಟೆ ವಿಭಾಗದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಿಜಯಕುಮಾರ್ ಅವರು ಸ್ಥಳ ಪರಿಶೀಲಿಸಿದ್ದು, ಮಳೆಗಾಲದಲ್ಲಿ ನೀರು ಅರಣ್ಯ ಪ್ರದೇಶದಿಂದ ಕೃಷಿಕರ ಜಾಗಕ್ಕೆ ನುಗ್ಗದಂತೆ ತಡೆಗೋಡೆ ಕಾಮಗಾರಿ ೨೦ ದಿನದೊಳಗೆ ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ.