ಕೊಡ್ಲಿಪೇಟೆ,ಡಿ.೧: ವಾಸದ ಮನೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಭಾಗಶಃ ಹಾನಿಯಾಗಿರುವ ಘಟನೆ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ನಡೆದಿದೆ.

ಬ್ಯಾಡಗೊಟ್ಟ ಗ್ರಾಮದ ನಿವಾಸಿ ಅಬ್ದುಲ್ ರೌಫ್ ಎಂಬವರಿಗೆ ಸೇರಿದ ವಾಸದ ಮನೆಯಲ್ಲಿ ಅವಘಡ ಸಂಭವಿಸಿದ್ದು, ಪರಿಣಾಮ ಮನೆಯು ಭಾಗಶಃ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಅಬ್ದುಲ್ ರೌಫ್ ಮತ್ತು ಅವರ ತಾಯಿ ಆಸಿಯಮ್ಮ ರವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಘಟನೆ ಸಂಭವಿಸಿದೆ. ಮನೆಯ ಮೇಲ್ಚಾವಣಿಯಲ್ಲಿ ಬೆಂಕಿಯ ಕೆನ್ನಾಲಿಗೆ ಕಂಡುಬAದ ಹಿನ್ನೆಲೆಯಲ್ಲಿ ಸಮೀಪದ ನಿವಾಸಿಗಳು, ಎಸ್ಕೆಎಸ್‌ಎಸ್‌ಎಫ್‌ನ ವಿಖಾಯ ತಂಡದ ಸದಸ್ಯರು ಬೆಂಕಿ ನಂದಿಸಲು ಮುಂದಾದರು.

ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಅವರು ಸೋಮವಾರಪೇಟೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.

ನೂರು ವರ್ಷಕ್ಕೂ ಹಳೆಯದಾದ ದೊಡ್ಡ ಮನೆಯಾಗಿದ್ದು ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ವಿದ್ಯುತ್ ಉಪಕರಣಗಳು, ಅಟ್ಟಣಿಗೆ ಸೇರಿದಂತೆ ಮೆಲ್ಚಾವಣಿಯ ಬೆಳೆಬಾಲುವ ಮರಗಳು, ಬಟ್ಟೆ ಮತ್ತು ದಾಖಲಾತಿಗಳು ಸಂಪೂರ್ಣ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಮತ್ತು ಸಿಬ್ಬಂದಿಗಳು, ಕಂದಾಯ ನಿರೀಕ್ಷಕ ಮನುಕುಮಾರ್, ಸ್ಥಳೀಯ ಚೆಸ್ಕಾಂ ಉಪ ವಲಯದ ಅಧಿಕಾರಿ ಹಿರೇಮಠ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದಿಂದ ಮನೆ ಕಳೆದುಕೊಂಡ ಅಬ್ದುಲ್ ರೌಫ್ ಅವರ ಸಂತ್ರಸ್ತ ಕುಟುಂಬ ಪರಿಹಾರ ಕೋರಿ ಕಂದಾಯ ಮತ್ತು ವಿದ್ಯುತ್ ಇಲಾಖೆಗೆ ಅರ್ಜಿ ಸಲ್ಲಿಸಿದೆ.