ಹೆಚ್.ಜೆ. ರಾಕೇಶ್ ಮಡಿಕೇರಿ, ನ. ೩೦: ಐತಿಹಾಸಿಕ ಮಡಿಕೇರಿ ದಸರಾ ಹಾಗೂ ಜನೋತ್ಸವ ಎಂದು ಪ್ರಖ್ಯಾತಿ ಗಳಿಸಿರುವ ಗೋಣಿಕೊಪ್ಪ ದಸರಾ ವೈಭವಯುತವಾಗಿ ನಡೆದು ಜನಮನವನ್ನು ತೃಪ್ತಿಗೊಳಿಸಿದೆ. ಎರಡು ಕಡೆಗಳಲ್ಲಿಯೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಲ್ಲಿ ಉತ್ಸಾಹ ತುಂಬಿದೆ. ವಿಜಯದಶಮಿಯಂದು ಸಹಸ್ರ ಸಂಖ್ಯೆಯಲ್ಲಿ ದೇಶದ ವಿವಿಧೆಡೆಯಿಂದ ಜನರು ಬಂದು ನಾಡಹಬ್ಬವನ್ನು ಕಣ್ತುಂಬಿ ಕೊಂಡಿದ್ದಾರೆ. ದಶಮಂಟಪ, ಸ್ತಬ್ಧಚಿತ್ರ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದೆ. ಗೋಣಿಕೊಪ್ಪ ಹಾಗೂ ಮಡಿಕೇರಿ ದಸರಾಕ್ಕೆ ದೊರೆಯುವ ಅನುದಾನದ ಪೈಕಿ ಗೋಣಿಕೊಪ್ಪಕ್ಕೆ ಈಗಾಗಲೇ ರೂ. ೫೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಮಡಿಕೇರಿಗೆ ಹಣ ಬಿಡುಗಡೆಯಾಗುವುದು ಬಾಕಿ ಉಳಿದಿದೆ. ಇದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ಸರಕಾರದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಮಡಿಕೇರಿ ದಸರಾಕ್ಕೆ ರೂ. ೧ ಕೋಟಿ ಹಾಗೂ ಗೋಣಿಕೊಪ್ಪಕ್ಕೆ ರೂ. ೫೦ ಲಕ್ಷ ಅನುದಾನವನ್ನು ಸರಕಾರ ಘೋಷಿಸಿತ್ತು. ಅದರಂತೆ ಪ್ರಕ್ರಿಯೆಗಳು ಪೂರ್ಣಗೊಂಡು ೧೦ ದಿನಗಳ ಹಿಂದೆ ಗೋಣಿಕೊಪ್ಪ ದಸರಾ ಆಡಳಿತ ಮಂಡಳಿಗೆ ರೂ. ೫೦ ಲಕ್ಷ ಹಣ ಕೈಸೇರಿದೆ. ಇನ್ನೂ ಮಡಿಕೇರಿ ದಸರಾದ ರೂ. ೧ ಕೋಟಿ ಅನುದಾನದ ಪೈಕಿ ರೂ. ೨೫ ಲಕ್ಷ ಖಾತೆಯಲ್ಲಿದ್ದು, ರೂ. ೫೦ ಲಕ್ಷ ಹಣ ಬಿಡುಗಡೆಗೆ ಆದೇಶ ಆಗಿದೆ. ಉಳಿದ ರೂ. ೨೫ ಲಕ್ಷ ಮತ್ತೊಂದು ಹಂತದಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ಲಭಿಸಿದೆ. ಆದರೆ, ಬಿಡಿಗಾಸು ಹಣ ಕೂಡ ಇನ್ನೂ ಸೇರಬೇಕಾದವರಿಗೆ ಸೇರಿಲ್ಲ. ಇದಕ್ಕೆ ಕೆಲವೊಂದು ತಾಂತ್ರಿಕ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ.

ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ

ಮಡಿಕೇರಿ ದಸರಾಕ್ಕೆ ಪ್ರಥಮ ಹಂತದಲ್ಲಿ ರೂ. ೨೫ ಲಕ್ಷ ಹಣ ಬಿಡುಗಡೆಯಾಗಿದೆ. ಇದಕ್ಕೆ ಪೂರಕವಾದ ಬಿಲ್ ಅನ್ನು ಮಡಿಕೇರಿ ದಸರಾ ಸಮಿತಿ ನೀಡಬೇಕಾಗಿದೆ. ಆದಾದ ನಂತರವೇ ಸಂಬAಧಿಸಿದವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಮೊದಲ ಹಂತದ ಅನುದಾನವನ್ನು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ತಂಡಗಳಿಗೆ ನೀಡಿದ ನಂತರ ಆದೇಶವಾಗಿರುವ ರೂ. ೫೦ ಲಕ್ಷ ೨ನೇ ಹಂತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಅನುದಾನದಲ್ಲಿ ದಶಮಂಟಪಗಳಿಗೆ ಹಾಗೂ ಕರಗಗಳಿಗೆ ಶೇ ೭೫ ನೀಡಿ ಉಳಿದ ಹಣವನ್ನು ೩ನೇ ಹಂತವನ್ನು ಉಪಯೋಗಿಸಿ ಕೊಂಡು ಪಾವತಿಸಲಾಗುತ್ತದೆ. ಈ ಪ್ರಕ್ರಿಯೆಗಳು ಮುಗಿದ ಬಳಿಕವಷ್ಟೆ ಉಳಿದ ರೂ. ೨೫ ಲಕ್ಷ ಹಣ ಬಿಡುಗಡೆಯಾಗಿ ಪಾವತಿಸಬೇಕಾ ದವರಿಗೆ ಹಣ ನೀಡಲಾಗುತ್ತದೆ.

ಈ ಸಂಬAಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ

(ಮೊದಲ ಪುಟದಿಂದ) ಬಿಲ್ ಸಲ್ಲಿಸಿ ಐಡಿ ರಚನೆ ಮಾಡಲಾಗಿದೆ ಎಂದು ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ. ಆದರೆ, ಯಾವುದೇ ‘ಬಿಲ್’ಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ಅತಂತ್ರ ಪರಿಸ್ಥಿತಿ

ಗೋಣಿಕೊಪ್ಪ ದಸರಾಕ್ಕೆ ಹಣ ಬಿಡುಗಡೆಯಾಗಿದೆ. ಆದರೆ, ಮಡಿಕೇರಿ ದಸರಾಕ್ಕೆ ಇನ್ನೂ ಅನುದಾನ ಬಿಡುಗಡೆಯಾಗದಿರುವುದು ಹಾಗೂ ಹಣವನ್ನು ಹಂತಹAತವಾಗಿ ಬಿಡುಗಡೆಗೊಳಿಸುತ್ತಿರುವ ಕ್ರಮಕ್ಕೆ ಕಾರಣ ಪ್ರಶ್ನೆಯಾಗಿಯೇ ಉಳಿದಿದೆ.

ಗೋಣಿಕೊಪ್ಪಕ್ಕೆ ಒಂದೆ ಹಂತದಲ್ಲಿ ರೂ. ೫೦ ಲಕ್ಷ ನೀಡಲಾಗಿದೆ. ಮಡಿಕೇರಿಗೆ ಮಾತ್ರ ಈ ರೀತಿ ನಿಯಮ ಹೇರಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದಕ್ಕೆ ಇಚ್ಛಾಶಕ್ತಿಯ ಕೊರತೆ ಕಾರಣ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಸರಾಕ್ಕೆ ವೇದಿಕೆ ನಿರ್ಮಿಸಿದವರು, ಲೈಟಿಂಗ್ ಅಳವಡಿಸಿದವರು, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವರು, ಊಟ ಉಣಬಡಿಸಿದವರು, ಕವಿಗೋಷ್ಠಿ, ಕ್ರೀಡಾಕೂಟ ಒಳಗೊಡಂತೆ ಇನ್ನಿತರ ಕಾರ್ಯಕ್ರಮ ಮಾಡಿದವರು ಸೇರಿದಂತೆ ಹಲವರು ತಮ್ಮ ಹಣ ಖರ್ಚು ಮಾಡಿ ದಸರಾ ಯಶಸ್ಸಿಗೆ ಕೈಜೋಡಿಸಿದ್ದಾರೆ. ಆದರೆ, ದಸರಾ ಕಳೆದು ೨ ತಿಂಗಳು ಕಳೆದರು ಅವರಿಗೆ ಹಣ ಪಾವತಿಯಾಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿವರ್ಷ ಮಡಿಕೇರಿ ದಸರಾ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ೨೦೧೬-೧೭ರಲ್ಲಿಯೂ ದಸರಾಕ್ಕೆ ಹಣ ಬಿಡುಗಡೆಯಾಗಿಲ್ಲ. ಇದೀಗ ಮತ್ತೇ ಇದೇ ರೀತಿಯ ಸಮಸ್ಯೆಗಳು ಉದ್ಭವಿಸಿವೆ.