ವೀರಾಜಪೇಟೆ, ನ. ೩೦: ದಲಿತ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಿಟ್ಟಿರುವ ಅನುದಾನವನ್ನು ಗ್ರಾಮ ಪಂಚಾಯಿತಿ ಮೂಲಕ ದಲಿತ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು. ಇಲ್ಲವಾದಲ್ಲಿ ತಾಲೂಕಿನ ಎಲ್ಲಾ ದಲಿತ ಸಮಿತಿಗಳು ಸೇರಿ ಪಂಚಾಯಿತಿ ಎದರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಅಧ್ಯಕ್ಷ ಹೆಚ್.ಆರ್. ಶಿವಣ್ಣ ಎಚ್ಚರಿಸಿದರು.

ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವಾಪ್ತಿಯ ದೇವಣಗೇರಿಯ ಚಿರಾಣೆ ಕಾಲೋನಿಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನೂತನ ಸಮಿತಿ ರಚನೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಅನೇಕ ವರ್ಷಗಳಿಂದಲೂ ಈ ಕಾಲೋನಿಯ ಜನರು ಯಾವುದೇ ಸೌಲಭ್ಯಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭ ಮಾತ್ರ ಬರುತ್ತಾರೆ. ನಂತರ ಸಮಸ್ಯೆಗಳಿಗೆ ಸ್ಪಂದಿಸುತಿಲ್ಲ. ಆದ್ದರಿಂದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸುವುದಾಗಿ ಹೇಳಿದರು.

ದಲಿತ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಹೆಚ್.ಜಿ. ಗೋಪಾಲ ಮಾತನಾಡಿ, ದಲಿತರು ದಲಿತರಾಗಿಯೇ ಉಳಿಯದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಉತ್ತಮ ಪ್ರಜೆಗಳಾಗಿ ಮಾಡಬೇಕು ಎಂದರು. ತಾಲೂಕು ಸಮಿತಿಯ ಸಂಚಾಲಕ ಹೆಚ್.ಪಿ. ಲವ ಮಾತನಾಡಿ, ಸರಕಾರ ಪಂಚಾಯಿತಿ ಮೂಲಕ ಪ.ಜಾತಿ ಕುಟುಂಬಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂದರು. ಜಿಲ್ಲಾ ಸಮಿತಿಯ ಹೆಚ್.ಕೆ. ವಿದ್ಯಾಧರ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆದು ಗ್ರಾಮ ಸಂಚಾಲಕರಾಗಿ ಹೆಚ್.ಜೆ. ಬೋಜ, ಉಪ ಸಂಚಾಲಕನಾಗಿ ಹೆಚ್.ಬಿ. ಬಿಪಿನ್, ಖಜಾಂಚಿಯಾಗಿ ಹೆಚ್.ಎಂ. ಗೋಪಿ ಹಾಗೂ ಅನೇಕ ಸದಸ್ಯರುಗಳು ನೂತನ ಸಮಿತಿಗೆ ಆಯ್ಕೆಗೊಂಡರು. ವೇದಿಕೆಯಲ್ಲಿ ತಿತಿಮತಿಯ ರೇಣುಕ, ಮಧು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.