ಮಡಿಕೇರಿ, ನ. ೨೯: ಕಾಫಿ-ಭತ್ತದ ಫಸಲು ಕುಯಿಲಿನ ಹಂತಕ್ಕೆ ಬರುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಮಳೆಯ ಆತಂಕ ಬೆಳೆಗಾರರನ್ನು ಕಂಗೆಡಿಸುತ್ತಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದೆ. ತಾ. ೨೮ ರಂದು ಹಲವು ಭಾಗಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದ್ದರೆ, ನಾಪೋಕ್ಲು, ನೆಲಜಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಿದ್ದು, ಜನರ ಆತಂಕ ಹೆಚ್ಚಾಗಿದೆ.
ಈ ವಿಭಾಗದಲ್ಲಿ ನಿನ್ನೆ ಅಪರಾಹ್ನದ ಬಳಿಕ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗುವುದರೊಂದಿಗೆ ಅರ್ಧದಿಂದ ಮುಕ್ಕಾಲು ಇಂಚಿನಷ್ಟು ಮಳೆ ಸುರಿದಿರುವುದಾಗಿ ವರದಿಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಸಂಜೆ ತುಂತುರು ಮಳೆಯಾಗಿತ್ತು. ಪ್ರಸ್ತುತ ಕಾಫಿ-ಭತ್ತದಂತಹ ವಾರ್ಷಿಕ ಫಸಲು ಕೈಗೆ ಬರುವ ಹಂತ ತಲುಪಿದ್ದು, ಈ ಸಮಯದಲ್ಲಿ ವಾತಾವರಣದಲ್ಲಿ ಅಸಹಜತೆ ಕಂಡುಬರುತ್ತಿರುವುದು ಬೆಳೆಗಾರರಲ್ಲಿ ಚಿಂತೆ ಮೂಡಿಸುವಂತಾಗಿದೆ. ಹುದಿಕೇರಿ ಸನಿಹದ ಹೈಸೊಡ್ಲೂರು ವ್ಯಾಪ್ತಿಯಲ್ಲೂ ನಿನ್ನೆ ಸುಮಾರು ಅರ್ಧ ಇಂಚಿನಷ್ಟು ಮಳೆಯಾಗಿರುವ ಕುರಿತು ವರದಿಯಾಗಿದೆ.