ಕಣಿವೆ, ನ. ೨೯: ಪಶ್ಚಿಮ ಘಟ್ಟ ಸಾಲಿನಲ್ಲಿ ಹೇರಳವಾಗಿರುವ ಔಷಧೀಯ ಸಸ್ಯಗಳನ್ನು ಸಂರಕ್ಷಿಸುವ ಮೂಲಕ ಅವುಗಳನ್ನು ಬಳಸುವ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಕರೆನೀಡಿದರು.

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಹಾಗೂ ಕೊಡಗು ಅರಣ್ಯ ವೃತ್ತದ ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ಕುಶಾಲನಗರದ ಗಂಧದ ಕೋಟೆಯ ಅರಣ್ಯ ತರಬೇತಿ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಔಷಧಿ ಸಸ್ಯಗಳ ಕುರಿತ ಕೊಡಗು ವೃತ್ತದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ವಂದಿಗಳ ಸಾಮರ್ಥ್ಯ ವರ್ಧನೆ ಮತ್ತು ಸಮನ್ವಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸುವ ಮೂಲಕ ಔಷಧೀಯ ಸಸ್ಯಗಳ ಬಳಕೆ ಹಾಗೂ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸಬೇಕು. ಹಾಗೆಯೇ ಸರ್ಕಾರವು ಔಷಧಿ ಸಸ್ಯಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು.

ನಾಟಿ ಔಷಧಿಗಳನ್ನು ಕೊಡುವ ಮೂಲಕ ಜನರ ಆರೋಗ್ಯದ ಮೂಲ ವಾಗಿದ್ದ ನಾಟಿ ವೈದ್ಯರನ್ನು ಗುರುತಿಸಿ ರಾಜ್ಯಮಟ್ಟದ ಸಮಾವೇಶವನ್ನು ನಡೆಸುವ ಮೂಲಕ ನಾಟಿ ವೈದ್ಯ ಪರಂಪರೆಯನ್ನು ಸಂರಕ್ಷಿಸುವ ಯೋಜನೆ ಜೀವವೈವಿಧ್ಯ ಮಂಡಳಿಯ ಮುಂದಿದೆ ಎಂದು ರವಿ ಕಾಳಪ್ಪ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಎ. ಸುದರ್ಶನ್ ಮಾತನಾಡಿ, ಜನರಿಗೆ ಬೇಕಾದಂತಹ ರೋಗ ನಿರೋಧಕ ಶಕ್ತಿ ನೀಡುವ ಮತ್ತು ಆರೋಗ್ಯ ವೃದ್ಧಿಸುವ ಗಿಡಮೂಲಿಕಾ ಉತ್ಪನ್ನಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ಇಂದು ಅತೀ ಅಗತ್ಯವಿದೆ. ಕೊಡಗಿನಲ್ಲಿ ಹೆಚ್ಚಾಗಿ ಕಂಡು ಬರುವ ಗಿಡ ಮೂಲಿಕೆಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯುವ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸವಾಗ ಬೇಕಿದೆ. ಪುರಾತನ ಆರೋಗ್ಯ ಪದ್ಧತಿ ಗಳಾದ ಆಯುರ್ವೇದ, ಯುನಾನಿ, ಹೋಮಿಯೋಪತಿಯಂತಹ ಗಿಡ ಮೂಲಿಕೆಗಳ ಬಳಕೆ ಇಂದು ಹೆಚ್ಚುತ್ತಿರುವ ಬಗ್ಗೆ ಸುದರ್ಶನ್ ಸಂತಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಕೊಡಗು ಅರಣ್ಯ ವೃತ್ತದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಮಾತನಾಡಿ, ಇಂದು ಎಲ್ಲೆಡೆ ನಾವು ನಿತ್ಯವು ಸೇವಿಸುವ ನೀರು, ಗಾಳಿ ಹಾಗೂ ಆಹಾರ ವಿಷಮಯವಾಗು ತ್ತಿದ್ದು ಜನರಲ್ಲಿ ರೋಗನಿರೋಧಕ ಶಕ್ತಿ ಕ್ಷೀಣವಾಗುತ್ತಿದೆ. ಆದರೆ ಜನರು ಆರೋಗ್ಯದಿಂದ ಜೀವಿಸಲು ಔಷಧೀಯ ಸಸ್ಯಗಳ ಬಳಕೆ ಅತೀ ಮುಖ್ಯ. ಹಾಗಾಗಿ ಗಿಡಮೂಲಿಕೆಗಳ ಸಂರಕ್ಷಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಕೃಷಿಕರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು.ಔಷಧೀಯ ಸಸ್ಯಗಳ ಪರಿಚಯ ಮತ್ತು ಭಾರತದ ವೈದ್ಯಕೀಯ ಪರಂಪರೆಯಲ್ಲಿ ಅವುಗಳ ಪಾತ್ರದ ಕುರಿತು ವೀರಾಜಪೇಟೆಯ ಆಯುರ್ವೇದ ಶಾಲೆಯ ವೈದ್ಯರಾದ ಡಾ. ಶ್ರೀನಿವಾಸ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ್ ಬಾಬು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ ಚಿಕ್ಕನರಗುಂದ, ನಿವೃತ್ತ ಅರಣ್ಯಾಧಿಕಾರಿ ಪಿ.ಪಿ. ಚಂದ್ರಶೇಖರ, ಹುಣಸೂರು ವನ್ಯ ಜೀವಿ ವಿಭಾಗದ ಎಸಿಎಫ್ ದಯಾನಂದ, ಸೋಮವಾರಪೇಟೆ ಎಸಿಎಫ್ ಗೋಪಾಲ್, ನೆಹರು, ಅರಣ್ಯ ತರಬೇತಿ ಕೇಂದ್ರದ ಅರಣ್ಯಾಧಿಕಾರಿ ಅರುಣ ಕುಮಾರ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಮೊದಲಾದವರಿದ್ದರು.

ಹುಣಸೂರು ವನ್ಯಜೀವಿ ವಿಭಾಗದ ಆರ್‌ಎಫ್‌ಓ ಪ್ರಸನ್ನ ಕುಮಾರ್ ಪ್ರಾರ್ಥಿಸಿದರು. ಅರುಣಕುಮಾರ್ ಸ್ವಾಗತಿಸಿದರು. ಡಾ. ಪ್ರಭು ನಿರೂಪಿಸಿದರು. ಪ್ರಸನ್ನ ವಂದಿಸಿದರು.