ಮಡಿಕೇರಿ, ನ.೨೭ : ರಾಜ್ಯ ಎಫ್ ಕೆಸಿಸಿಐನ ಪ್ರವಾಸೋದ್ಯಮ ಸಮಿತಿಗೆ ಕೊಡಗು ಜಿಲ್ಲೆಯಿಂದ ಬಿ.ಆರ್. ನಾಗೇಂದ್ರ ಪ್ರಸಾದ್ ಅವರು ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಎಫ್‌ಕೆಸಿಸಿಐ ನ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷರಾಗಿ ಜಿ.ಕೆ. ಶೆಟ್ಟಿ ಒಂದು ವರ್ಷದ ಅವಧಿಗೆ ನೇಮಕಗೊಂಡಿದ್ದಾರೆ. ಒಟ್ಟು ೧೫ ಸದಸ್ಯರಿರುವ ಈ ಸಮಿತಿಗೆ ಕೊಡಗು ಜಿಲ್ಲೆಯಿಂದ ಜಿಲ್ಲಾ ಹೋಟೇಲ್, ರೆಸಾರ್ಟ್ ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಎಫ್‌ಕೆಸಿಸಿಐನ ಅಧ್ಯಕ್ಷ ಬಿ.ವಿ. ಗೋಪಾಲ್ ರೆಡ್ಡಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ನಾಗೇಂದ್ರ ಪ್ರಸಾದ್, ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಗಬೇಕಾದ ಪ್ರಗತಿ ಕಾರ್ಯಗಳ ಬಗ್ಗೆ ವಿಚಾರ ಮಂಡಿಸಿದರು. ಮುಂದಿನ ದಿನಗಳಲ್ಲಿ ಎಫ್‌ಕೆಸಿಸಿಐನ ಪ್ರವಾಸೋದ್ಯಮ ಸಮಿತಿ ವತಿಯಿಂದ ರಾಜ್ಯ ಪ್ರವಾಸೋದ್ಯಮ ಸಚಿವರು, ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿಯಾಗಿ ಕೊಡಗಿನ ಪ್ರವಾಸೋದ್ಯಮ ಅಬಿವೃದ್ಧಿ ನಿಟ್ಟಿನಲ್ಲಿ ಸಮಗ್ರ ಪ್ರಸ್ತಾವನೆ ಮಂಡಿಸಿ ಅನುಮೋದನೆಗೆ ಪ್ರಯತ್ನಿಸುವ ತೀರ್ಮಾನವನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.