ಶ್ರೀಮಂಗಲ, ನ. ೨೭: ಹುದಿಕೇರಿಯಿಂದ ಬಿರುನಾಣಿಗೆ ಹೈಸೂಡ್ಲೂರು- ಪೊರಾಡು ಗ್ರಾಮದ ಮೂಲಕ ಗ್ರಾಮ ಸಡಕ್ ಯೋಜನೆಯಲ್ಲಿ ೬ ವರ್ಷದ ಹಿಂದೆ ನಿರ್ಮಾಣವಾಗಿರುವ ಸಂಪರ್ಕ ರಸ್ತೆ ತೀವ್ರವಾಗಿ ಗುಂಡಿ ಬಿದ್ದು ಹದಗೆಟ್ಟಿದೆ. ವಾಹನ ಸಂಚಾರಕ್ಕೆ ತುಂಬಾ ಕಷ್ಟವಾಗಿದ್ದು, ಗ್ರಾಮಸಡಕ್ ಯೋಜನೆಯ ನಿಯಮದಂತೆ ಕಳೆದ ವರ್ಷ ರಸ್ತೆಯನ್ನು ಮರು ಡಾಂಬರೀಕರಣ ಮಾಡಬೇಕಾಗಿದ್ದರೂ ಮಾಡಿಲ್ಲ. ಇದುವರೆಗೆ ಸಂಬAಧಿಸಿದ ಗುತ್ತಿಗೆದಾರ ನಿರ್ವಹಣೆ ಮಾಡುತ್ತಿಲ್ಲ. ಇಲಾಖಾಧಿಕಾರಿಗಳು ಸ್ಪಂದಿಸುತ್ತಿಲ್ಲ. ಆದ್ದರಿಂದ ಮುಂದಿನ ೧೫ ದಿನದೊಳಗೆ ರಸ್ತೆಗಳ ಗುಂಡಿ ಮುಚ್ಚಿ ಮರು ಡಾಂಬರೀಕರಣ ಮಾಡದಿದ್ದರೆ ಪೊನ್ನಂಪೇಟೆ- ಶ್ರೀಮಂಗಲ ನಡುವೆ ಹುದುಕೇರಿ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಈ ಬಗ್ಗೆ ಹೈಸೂಡ್ಲೂರು, ಪೊರಾಡು ಹಾಗೂ ಬಾಡಗರಕೇರಿ ಗ್ರಾಮಸ್ಥರು ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದು, ತೀವ್ರವಾಗಿ ಹದಗೆಟ್ಟಿರುವ ರಸ್ತೆಯನ್ನು ಗ್ರಾಮಸಡಕ್ ಯೋಜನೆಯ ನಿಯಮದಂತೆ ೨೦೨೧ರ ಮಾರ್ಚ್ ತಿಂಗಳ ಒಳಗೆ ಸಂಪೂರ್ಣ ಮರು ಡಾಂಬರೀಕರಣ ಮಾಡಬೇಕಾಗಿತ್ತು. ಆದರೆ ಕಳೆದ ವರ್ಷವೂ ಕಾಮಗಾರಿಯನ್ನು ಮಾಡಿಲ್ಲ. ಈ ವರ್ಷವೂ ಸಹ ಮಳೆ ನಿಂತು ತಿಂಗಳುಗಳಾದರೂ ಕಾಮಗಾರಿ ನಡೆಸುವ ಬಗ್ಗೆ ಗುತ್ತಿಗೆದಾರರಾಗಲಿ ಸಂಬAಧಿಸಿದ ಇಲಾಖಾಧಿಕಾರಿ ಗಳಾಗಲಿ ಪ್ರಯತ್ನಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹುದಿಕೇರಿಯಿಂದ ಬಿರುನಾಣಿಗೆ ಸಂಪರ್ಕ ರಸ್ತೆಯಾಗಿರುವ ಈ ೮ ಕಿ.ಮೀ.ರಸ್ತೆಯು ಪ್ರಸಿದ್ಧ ಮೃತ್ಯುಂಜಯ ದೇವಸ್ಥಾನಕ್ಕೂ ಸಹ ೧೨ ಕಿ.ಮೀ. ರಷ್ಟು ಅಂತರವನ್ನು ಕಡಿಮೆ ಮಾಡುತ್ತದೆ ಹಾಗೂ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳಿಗೂ ಸಹ ಅಂತರ ಕಡಿತ ಒದಗಿಸುವ ಈ ರಸ್ತೆ ಹದಗೆಟ್ಟಿರುವುದರಿಂದ ಶಿಕ್ಷಣ ಸಂಸ್ಥೆಯ ಬಸ್ಸುಗಳು, ಹಾಗೂ ಶಾಲಾ, ಸಾರ್ವಜನಿಕರ ವಾಹನ ಸಂಚಾರ ಸೇರಿದಂತೆ ದಿನನಿತ್ಯ ನೂರಾರು ವಾಹನ ಸಂಚರಿಸುತ್ತಿವೆ. ಸ್ಥಳೀಯ ಜನರು, ದೇವಸ್ಥಾನಕ್ಕೆ ಬರುವ ನೂರಾರು ಭಕ್ತಾದಿಗಳು ಸಹ ರಸ್ತೆ ಗುಂಡಿ ಬಿದ್ದಿರುವುದರಿಂದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದರು.

ಗ್ರಾಮಸ್ಥರ ಪರ ಮಾತನಾಡಿದ ಮಾಜಿ ಸೈನಿಕ ಅಣ್ಣೀರ ಪ್ರದೀಪ್ ಮುಂದಿನ ಹದಿನೈದು ದಿನದೊಳಗೆ ಈ ರಸ್ತೆಯನ್ನು ಸರಿಪಡಿಸದಿದ್ದರೆ ರಸ್ತೆ ತಡೆಯನ್ನು ಎಲ್ಲ ಸಂಘ ಸಂಸ್ಥೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಕೈಗೊಳ್ಳಲಾಗುವುದು ಇದಕ್ಕೆ ಸಂಬAಧಿಸಿದ ಗುತ್ತಿಗೆದಾರರು ಹಾಗೂ ಇಂಜಿನಿಯರ್ ನೇರ ಹೊಣೆ ಎಂದು ಹೇಳಿದರು.

ಹೈಸೂಡ್ಲೂರು ಗ್ರಾಮದ ಕಳ್ಳೇಂಗಡ ಸುರೇಂದ್ರ ಮಾತನಾಡಿ, ರಸ್ತೆ ತೀವ್ರ ಹದಗೆಟ್ಟಿದ್ದು ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಗ್ರಾಮಸ್ಥರು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಾಗೂ ಕಾರ್ಮಿಕರು, ಸಾರ್ವಜನಿಕರು ತೀವ್ರ ಸಂಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಇದುವರೆಗೆ ಗುತ್ತಿಗೆದಾರರು ಹಾಗೂ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಪ್ರತಿಭಟನೆಯ ನಿಲುವು ತಳೆಯಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಗ್ರಾಮಸ್ಥರಾದ ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಲ್ಯಮೀದೇರಿರ ಸುರೇಶ್, ಪಾರುವಂಗಡ ಸುರೇಶ್, ಮಾದೀರ ಅಜಿತ್, ಬಯವಂಡ ಝರು, ಬಾನಂಗಡ ಪ್ರಶಾಂತ್, ಕೋಟ್ರಮಾಡ ರಾಕೇಶ್, ಹೊಟ್ಟೆಂಗಡ ಝರು, ಕೊಡಂಗಡ ರೋಷನ್, ಮಂಡAಗಡ ಯೋಗೇಶ್, ಕೋಟ್ರಮಾಡ ಗಿಣಿ, ಮಂಡAಗಡ ರವಿ, ಕಳ್ಳೆಂಗಡ ಸೋಮಯ್ಯ, ಕೋಟ್ರಮಾಡ ಸಾಬು, ಬಾನಂಗಡ ಪ್ರದೀಪ್, ಕೋಟ್ರಮಾಡ ಕಿಟ್ಟಿ ಹಾಜರಿದ್ದರು.