ಸೋಮವಾರಪೇಟೆ, ನ. ೨೪: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವೆಂಕಟೇಶ್ವರ ಬಡಾವಣೆಯಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಪ್ರಗತಿಯಲ್ಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ದೂರಿದ ಹಿನ್ನೆಲೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ನಿಗದಿತ ಪ್ರಮಾಣದಲ್ಲಿ ವೆಟ್‌ಮಿಕ್ಸ್ ಹಾಕುತ್ತಿಲ್ಲ. ಕಾಮಗಾರಿಯು ಕ್ರಿಯಾಯೋಜನೆಯಂತೆ ನಡೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿ ಶಾಸಕರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ ಶಾಸಕರು, ೬ ಇಂಚು ವೆಟ್‌ಮಿಕ್ಸ್ ಹಾಕಬೇಕಿದ್ದು, ಪರಿಶೀಲನೆ ಸಂದರ್ಭ ೨ ಇಂಚು ಮಾತ್ರ ವೆಟ್‌ಮಿಕ್ಸ್ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕ್ರಿಯಾಯೋಜನೆಯಂತೆ ಕಾಮಗಾರಿ ನಡೆಸಬೇಕು. ವೆಟ್‌ಮಿಕ್ಸ್ನ ಪ್ರಮಾಣವನ್ನು ಹೆಚ್ಚಿಸಬೇಕು. ಅಲ್ಲಿಯವರೆಗೂ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಇಂಜಿನಿಯರ್ ವೆಂಕಟೇಶ್ ನಾಯಕ್ ಸೇರಿದಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಕಾಮಗಾರಿ ಕಳಪೆಯಾದರೆ ಸಂಬAಧಿಸಿದ ಅಭಿಯಂತರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯ ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.