ಕೂಡಿಗೆ, ನ. ೨೪: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ, ಕಲ್ಲುಕೆರೆ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಬಾಣಾವರ ಮೀಸಲು ಅರಣ್ಯ ಪ್ರದೇಶದಿಂದ ಬಂದಿರುವ ಕಾಡಾನೆಗಳು ಚಿನ್ನನಹಳ್ಳಿ ಮೂಲಕ ಹುಲುಸೆ ೬ನೇ ಹೊಸ ಕೋಟೆ, ಕಲ್ಲುಕರೆ, ಹಳೆಕೋಟೆ ವ್ಯಾಪ್ತಿಯಲ್ಲಿ ಈಗಾಗಲೇ ಹಾರಂಗಿ ಅಚ್ಚು ಕಟ್ಟು ಪ್ರದೇಶದಲ್ಲಿ ಬೆಳೆಯಲಾಗಿರುವ ಭತ್ತ ಬೆಳೆಯನ್ನು ಕಾಡಾನೆಗಳು ನಷ್ಟಪಡಿಸಿವೆ. ಹುಲುಸೆ ಗ್ರಾಮ ನಾಗಣ್ಣ, ಸುಬ್ರಾಯ, ರಾಜಣ್ಣ ಗಿರೀಶ್ ಸೇರಿದಂತೆ ಅನೇಕ ರೈತರ ಭತ್ತದ ಬೆಳೆ ಮಾಡಿರುವ ಜಮೀನಿಗೆ ದಾಳಿ ಮಾಡಿ ಭಾರೀ ನಷ್ಟಪಡಿಸಿವೆ. ಈ ವ್ಯಾಪ್ತಿಯ ರೈತರು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದಾರೆ. ಅರಣ್ಯ ಇಲಾಖೆಯವರು ಚಿನ್ನನಹಳ್ಳಿಯ ವ್ಯಾಪ್ತಿಯ ಅರಣ್ಯ ಕಂದಕವನ್ನು ಸರಿಪಡಿಸುವಂತೆ ಒತ್ತಾಯ ಮಾಡಿದ್ದಾರೆ. ಸ್ಥಳಕ್ಕೆ ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿ ಮತ್ತು ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.