ಮಡಿಕೇರಿ, ನ. ೨೩: ೨೦೨೨ರ ವರ್ಷಾಂತ್ಯ ಇನ್ನೇನು ಸಮೀಪಿಸುತ್ತಿದೆ; ಈಗಾಗಲೇ ನವೆಂಬರ್ ತಿಂಗಳು ಕೊನೆಯ ವಾರಕ್ಕೆ ಕಾಲಿರಿಸಿದ್ದು, ಕೃಷಿ ಪ್ರಧಾನ ಹಾಗೂ ಕಾಫಿ ಅವಲಂಬಿತ ಜಿಲ್ಲೆಯಾದ ಕೊಡಗಿನಲ್ಲಿ ಈ ಕೃಷಿ ಫಸಲನ್ನು ತುಂಬಿಸಿಕೊಳ್ಳುವ ತವಕದಲ್ಲಿ ಜಿಲ್ಲೆಯ ರೈತರು - ಬೆಳೆಗಾರರು ಇದ್ದಾರೆ. ಒಂದೆಡೆ ಅರೆಬಿಕಾ ಕಾಫಿ ಕುಯಿಲು ಈಗಾಗಲೇ ಆರಂಭವಾಗಿದೆ. ಮತ್ತೊಂದೆಡೆ ರೋಬಸ್ಟಾ ಕಾಫಿಯೂ ದಿನೇ ದಿನೇ ಹಣ್ಣಾಗುತ್ತಿದೆ. ಇದರ ನಡುವೆ ಭತ್ತದ ಕೃಷಿ ಮಾಡಿರುವ ರೈತರ ಗದ್ದೆಗಳಲ್ಲಿ ಭತ್ತದ ಫಸಲೂ ಕುಯಿಲಿನ ಹಂತ ತಲುಪಿದೆ. ಕೆಲವೆಡೆ ವಿವಿಧ ತಳಿಗಳ ಭತ್ತದ ಕಟಾವೂ ಆರಂಭಗೊAಡಿದೆ. ಈ ಕೆಲಸ - ಕಾರ್ಯಗಳ ಒತ್ತಡದಲ್ಲಿ ಜನರು ಪ್ರಸ್ತುತ ಕಾರ್ಯತತ್ಪರರಾಗಿದ್ದಾರೆ.

ಇಂತಹ ಪರಿಸ್ಥಿತಿಯ ನಡುವೆ ಈ ಬಾರಿಯೂ ವಾತಾವರಣ ಜನರಲ್ಲಿ ಆತಂಕ ಸೃಷ್ಟಿಸುವಂತಿದೆ. ವಾತಾವರಣದಲ್ಲಿನ ಅಸಹಜತೆಯಿಂದಾಗಿ ಮತ್ತೆ ಜಿಲ್ಲೆಯಾದ್ಯಂತ ಮೋಡ ಕವಿದ ಸನ್ನಿವೇಶ ಎದುರಾಗಿದೆ. ಕಳೆದ ರಾತ್ರಿ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಸುತ್ತಮುತ್ತಲಿನಲ್ಲಿ ಸಣ್ಣ ಪ್ರಮಾಣದ ಮಳೆಯೂ ಸುರಿದಿದ್ದು, ಬೆಳೆಗಾರರ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಕಳೆದ ವರ್ಷವೂ ಈ ಅವಧಿಯಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾಗಿದ್ದು, ಜನತೆ ತೀವ್ರ ಸಂಕಷ್ಟ ಎದುರಿಸಿದ್ದರು.

(ಮೊದಲ ಪುಟದಿಂದ) ವಾರ್ಷಿಕವಾಗಿ ಒಮ್ಮೆ ಮಾತ್ರ ಸಿಗುವ ಫಸಲನ್ನು ಮನೆ ತುಂಬಿಸಿಕೊಳ್ಳುವ ಸಂತಸದ ನಡುವೆ ಕೈಗೆ ಬಂದಿರುವ ಬೆಳೆ ಎಲ್ಲಿ ನಾಶವಾಗುತ್ತದೋ ಎಂಬ ಸಹಜ ಭಯ ಕಾಡುವಂತಾಗಿದೆ. ಇದರೊಂದಿಗೆ ತೋಟದ ಎರತೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಕಾರ್ಮಿಕರ ಸಮಸ್ಯೆಯೂ ಹೆಚ್ಚಿದ್ದು, ಪ್ರಸ್ತುತ ತೋಟ ಕಾರ್ಮಿಕರಿಗೆ ಭಾರೀ ಬೇಡಿಕೆ ಕಂಡುಬರುತ್ತಿದೆ.

ವರ್ಷವಿಡೀ ಮಳೆ... ಮಳೆ...

ಪ್ರಸಕ್ತ ಸಾಲಿನಲ್ಲಿ ಕೊಡಗಿನ ಜನರು ವರ್ಷವಿಡೀ ಮಳೆಯ ಪರಿಸ್ಥಿತಿಯನ್ನೇ ಎದುರಿಸುವಂತಾಗಿದೆ. ಕಳೆದ ಬೇಸಿಗೆ ಅವಧಿಯಲ್ಲಿನ ಒಂದಷ್ಟು ದಿನಗಳನ್ನು ಹೊರತುಪಡಿಸಿದರೆ, ಇನ್ನುಳಿದ ಎಲ್ಲಾ ತಿಂಗಳಲ್ಲೂ ಮಳೆ - ಗಾಳಿ ಹಲವಷ್ಟು ಸಮಸ್ಯೆಗಳನ್ನು ಉಂಟು ಮಾಡಿದೆ. ಮುಂಗಾರು ಮಳೆ ಆರಂಭದ ಜೂನ್ ಬಳಿಕವಂತೂ ವಾಡಿಕೆ ಮಳೆಯೊಂದಿಗೆ ನಿರಂತರವಾಗಿ ಎದುರಾದ ವಾಯುಭಾರ ಕುಸಿತ, ಚಂಡಮಾರುತದAತಹ ವಾತಾವರಣದಲ್ಲಿನ ಅಸಹಜತೆಯಿಂದಾಗಿ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಮಳೆಯಾಗಿದೆ. ಈ ತನಕ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಸರಾಸರಿ ೩೦ ಇಂಚುಗಳಷ್ಟು ಅಧಿಕ ಮಳೆಯಾಗಿದೆ. ಅದರಲ್ಲೂ ಮಡಿಕೇರಿ ತಾಲೂಕಿನಲ್ಲಿ ೫೦ ಇಂಚುಗಳಿಗೂ ಅಧಿಕ ಮಳೆ ಸುರಿದಿದೆ.

ಅತಿವೃಷ್ಟಿಯ ಪರಿಣಾಮವಾಗಿ ಜಿಲ್ಲೆಯಲ್ಲಿನ ಬಹುತೇಕ ಎಲ್ಲಾ ಬೆಳೆಗಳಿಗೂ ವ್ಯತಿರಿಕ್ತ ಪರಿಣಾಮವಾಗಿದ್ದು, ವ್ಯಾಪಕ ನಷ್ಟವೂ ಸಂಭವಿಸಿದೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ಎಲ್ಲಾ ಗ್ರಾಮಗಳಲ್ಲೂ ಶೇ. ೩೩ ಕ್ಕಿಂತ ಬೆಳೆ ನಷ್ಟವಾಗಿರುವ ಸಮೀಕ್ಷಾ ವರದಿಯಂತೆ ಈಗಾಗಲೇ ಬೆಳೆ ಹಾನಿ ಪರಿಹಾರದ ಅರ್ಜಿಗಳನ್ನೂ ಜಿಲ್ಲಾಡಳಿತದ ಮೂಲಕ ಸ್ವೀಕರಿಸಲಾಗುತ್ತಿದೆ. ಇಂತಹ ಸನ್ನಿವೇಶದ ನಡುವೆ ಮತ್ತೆ ಮತ್ತೆ ವಾತಾವರಣದಲ್ಲಿ ಕಂಡು ಬರುತ್ತಿರುವ ಅಸಹಜತೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿರುವುದು ವಿಷಾದಕರವಾಗಿದೆ.