ಮುಳ್ಳೂರು, ನ. ೨೨: ಶನಿವಾರಸಂತೆ ಹೋಬಳಿ ಸುತ್ತಮುತ್ತ ನೆಲೆಸಿರುವ ಅಸ್ಸಾಂ ಮತ್ತು ಬಾಂಗ್ಲ್ಲಾ ನಿವಾಸಿಗಳಿಂದ ಗಾಂಜಾ ಮಾರಾಟ, ಗೋಹತ್ಯೆ, ಗೋಮಾಂಸ ಮಾರಾಟ ಮಾಡುವ ಕಾನೂನು ಬಾಹಿರ ಅಕ್ರಮ ಚಟುವಟಿಕೆ ನಡೆಸುತ್ತಿರುವುದರ ಜೊತೆಯಲ್ಲಿ ಅವರುಗಳು ಸುತ್ತಮುತ್ತಲಿನ ಗ್ರಾಮಗಳ ಆಯಾಯ ಜಾಗದಲ್ಲಿ ನೆಲೆ ಊರಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಮತ್ತು ಪೊಲೀಸರು ಗಂಭೀರ ಪ್ರಕರಣ ಎಂದು ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳು ವಂತೆ ಕೊಡ್ಲಿಪೇಟೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರು ಶನಿವಾರಸಂತೆ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಪೊಲೀಸರಿಗೆ ಮನವಿ ಪತ್ರ ನೀಡಿದರು.
ಶನಿವಾರಸಂತೆ ಹೋಬಳಿ ಸುತ್ತಮುತ್ತಲಿನ ಗ್ರಾಮಗಳಿಗೆ ಅಸ್ಸಾಂ, ಬಾಂಗ್ಲ್ಲಾ ನಿವಾಸಿಗರು ಕೂಲಿಯನ್ನು ಅರಸಿಕೊಂಡು ಬಂದು ನೆಲೆಸಿದ್ದಾರೆ. ಇದರಲ್ಲಿ ಕೆಲವರು ಗಾಂಜಾ ಮಾರಾಟ, ಗೋಹತ್ಯೆ ಮತ್ತು ಗೋಮಾಂಸ ಮಾರಾಟ, ಅಕ್ರಮ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಿ ಗ್ರಾಮಸ್ಥರ ವಿಶ್ವಾಸಗಳಿಸಿ ಸಣ್ಣಪುಟ್ಟ ವ್ಯಾಪಾರವನ್ನು ಮಾಡುತ್ತಿದ್ದಾರೆ. ಕಾಫಿ ತೋಟದಲ್ಲಿ ಗೋವುಗಳನ್ನು ಹತ್ಯೆಗೈದು ಗೋಮಾಂಸ ಮಾರಾಟ ಮಾಡುತ್ತಿರುವ ಪ್ರಕರಣಗಳು ಹಲವು ಬಾರಿ ನಡೆದಿವೆೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕ್ರಮವನ್ನು ಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮನವಿ ಪತ್ರವನ್ನು ಶನಿವಾರಸಂತೆ ಕಂದಾಯ ಇಲಾಖೆ ಉಪ ತಹಶೀಲ್ದಾರ್ ಶ್ರೀದೇವಿ, ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಗೆ ಸಲ್ಲಿಸಿದರು. ಈ ಸಂದರ್ಭ ಸಂಘಟನೆ ಪ್ರಮುಖರಾದ ಪುನೀತ್ ತಳೂರು, ಸೋಮಶೇಖರ್ ಪೂಜಾರ್, ದಿನಿ ಬಿಳಹ, ಪ್ರಸನ್ನ, ನವೀನ್, ಅರುಣ್, ರಕ್ಷಿತ್ ಮುಂತಾದವರಿದ್ದರು.