*ಗೋಣಿಕೊಪ್ಪ, ನ. ೨೨: ಬೆಂಗಳೂರು ಜೀವ ರಕ್ಷಕ ಟ್ರಸ್ಟ್, ಮೈಸೂರು ರೋಟರಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ರೋಟರಿ ಇ ಕ್ಲಬ್, ವೀರಾಜಪೇಟೆ ಕೂರ್ಗ್ ಇನ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಗೋಣಿಕೊಪ್ಪದಲ್ಲಿ ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಜಾಗೃತಿ ಕಾರ್ಯಕ್ರಮ ನಡೆಯಿತು.
ಮೈಸೂರು ಮೂಲಕ ತಿತಿಮತಿ ಮಾರ್ಗದಲ್ಲಿ ಗೋಣಿಕೊಪ್ಪಕ್ಕೆ ಆಗಮಿಸಿದ ಅಭಿಯಾನದ ತಂಡ ಬಸ್ ನಿಲ್ದಾಣದ ಎದುರು ಜಾಗೃತಿ ಮೂಡಿಸಿತು.
ಬೀದಿ ನಾಟಕದ ಮೂಲಕ ಹೆಲ್ಮೆಟ್ ಜೀವ ರಕ್ಷಕ ಎಂಬುವುದನ್ನು ಬಿಂಬಿಸಲಾಯಿತು. ಹೆಲ್ಮೆಟ್ ಧರಿಸಿದರೆ ದೊಡ್ಡ ಮಟ್ಟದ ಅಪಘಾತಕ್ಕೆ ಸಿಲುಕಿದರೂ ಸಾವಿನಿಂದ ಪಾರಾಗುವ ಅವಕಾಶ ಹೆಚ್ಚಿದೆ ಎಂಬುವುದನ್ನು ತಿಳಿಸಿಕೊಡ ಲಾಯಿತು. ಮದ್ಯಪಾನ, ಮೊಬೈಲ್ ಬಳಕೆ ಮಾಡಿಕೊಂಡು ದ್ವಿಚಕ್ರ ಸವಾರಿ ಅಪಾಯ ಎಂಬುವುದನ್ನು ತಿಳಿಸಲಾಯಿತು. ಬೇಜವಬ್ದಾರಿ ಯಿಂದ ಅಪಘಾತ ಸಂಭವಿಸಿದಾಗ ಕುಟುಂಬಕ್ಕೆ ಆಗುವ ಆಘಾತದ ಅರಿವು ಮೂಡಿಸಲಾಯಿತು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಖಜಾಂಚಿ ಡಾ. ಚಂದ್ರಶೇಖರ್ ಮಾತನಾಡಿ, ಪ್ರಜ್ಞೆ ತಪ್ಪಿದ ರೋಗಿಯ ಬಾಯಿಗೆ ನೀರು ಹಾಕುವುದರಿಂದ ಸಾವಿಗೆ ಆಹ್ವಾನ ನೀಡಿದಂತಾಗುತ್ತದೆ. ನಾಲಿಗೆ ಮಗುಚಿ ಬಿದ್ದಿರುವ ಕಾರಣ ನೀರು ನೇರವಾಗಿ ಶ್ವಾಸನಾಳಕ್ಕೆ ಹೋಗುವುದರಿಂದ ಉಸಿರಿನಲ್ಲಿ ನೀರು ಸಂಚರಿಸುವುದ ರಿಂದ ಸಾವು ಸಂಭವಿಸುತ್ತದೆ. ಅಪಘಾತ ಸಂದರ್ಭ ಗಾಯಾಳು ವನ್ನು ಒಂದು ಬದಿಗೆ ಮಲಗಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಉತ್ತಮ ಮಾರ್ಗ. ಜೀವ ಉಳಿಸಲು ನಾವು ಮುಂಜಾಗ್ರತೆ ವಹಿಸಿದಂತಾಗುತ್ತದೆ ಎಂದರು.
ಬೈಕಾಥಾನ್ ಮೂಲಕ ೬೦ಕ್ಕೂ ಹೆಚ್ಚು ಸವಾರರು ಪಾಲ್ಗೊಂಡರು. ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಜಾಗೃತಿ ನಂತರ ವೀರಾಜಪೇಟೆ ಮಡಿಕೇರಿಗೆ ತೆರಳಿತು.
ರಸ್ತೆ ಸುರಕ್ಷತೆ, ಪ್ರಥಮ ಚಿಕಿತ್ಸೆ, ಗಾಯಗೊಂಡ ರೋಗಿಯ ಚಿಕಿತ್ಸೆ, ತಲೆಗೆ ಪೆಟ್ಟಾದಾಗ, ಕುತ್ತಿಗೆಗೆ ಪೆಟ್ಟಾದಾಗ, ತೀವೃ ರಕ್ತಸ್ರಾವ, ಮೂಳೆ ಮುರಿತ, ಜಜ್ಜಿದ ಗಾಯ, ಮೂರ್ಚೆ ಹೋಗುವುದು, ಸುಟ್ಟಗಾಯ ಸಂದರ್ಭ ಯಾವ ರೀತಿ ಮುಂಜಾಗೃತೆ ಮಾಹಿತಿ ನೀಡಲಾಯಿತು. ಬೆಂಗಳೂರು ಜೀವ ರಕ್ಷಕ ಟ್ರಸ್ಟ್ ಸಿಇಒ ಡಾ. ರಾಮಕೃಷ್ಣ, ವಿರಾಜಪೇಟೆ ಕೂರ್ಗ್ ಇನ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ವೈದ್ಯರಾದ ಡಾ. ಶಾಂತಲಾ, ಡಾ. ಜಿತೇಶ್, ಪ್ರಮುಖರಾದ ಮಂಜೇಶ್, ತೇಜಸ್ ಇದ್ದರು.