ಚೆಟ್ಟಳ್ಳಿ, ನ. ೨೧: ಎಡಪಾಲ ಸ್ಪೋರ್ಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಎಡಪಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಯಲ್ಲಿ ಆತಿಥೇಯ ದೇಶಪ್ರೇಮಿ ಸ್ಪೋರ್ಟ್ಸ್ ಅಸೋಸಿಯೇಷನ್ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು. ದ್ವಿತೀಯ ಸ್ಥಾನಕ್ಕೆ ಡೆಕ್ಕನ್ ನಾಪೋಕ್ಲು ತಂಡ ತೃಪ್ತಿಪಟ್ಟುಕೊಂಡಿದೆ.

ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ದೇಶಪ್ರೇಮಿ ತಂಡವು ೧೭-೨೧ ಹಾಗೂ ೧೬-೨೧ ಅಂಕಗಳ ಎರಡು ನೇರ ಸೆಟ್‌ಗಳಿಂದ ಗೆದ್ದು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯವು ಗೌತಮ್ ಫ್ರೆಂಡ್ಸ್ ಮೂರ್ನಾಡು ಹಾಗೂ ಡೆಕ್ಕನ್ ನಾಪೋಕ್ಲು ತಂಡಗಳ ನಡುವೆ ನಡೆಯಿತು. ಡೆಕ್ಕನ್ ನಾಪೋಕ್ಲು ತಂಡವು ಗೆದ್ದು ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯವು ದೇಶಪ್ರೇಮಿ ಸ್ಪೋರ್ಟ್ಸ್ ಅಸೋಸಿಯೇಷನ್ ಎಡಪಾಲ ಹಾಗೂ ಗ್ರೀನ್ ಸ್ಟಾರ್ ಕರಿಕೆ ತಂಡಗಳ ನಡುವೆ ನಡೆಯಿತು.

ದೇಶಪ್ರೇಮಿ ಸ್ಪೋರ್ಟ್ಸ್ ಅಸೋಸಿಯೇಷನ್ ತಂಡವು ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿತು. ಮೂರನೇ ಸ್ಥಾನಕ್ಕಾಗಿ ಸೆಮಿಫೈನಲ್‌ನಲ್ಲಿ ಪರಾಜಿತ ತಂಡಗಳಾದ ಗೌತಮ್ ಫ್ರೆಂಡ್ಸ್ ಮೂರ್ನಾಡು ಹಾಗೂ ಗ್ರೀನ್ ಸ್ಟಾರ್ ಕರಿಕೆ ತಂಡಗಳ ನಡುವಿನ ಪಂದ್ಯದಲ್ಲಿ ಗ್ರೀನ್ ಸ್ಟಾರ್ ಕರಿಕೆ ತಂಡ ಗೆದ್ದು ತೃತೀಯ ಸ್ಥಾನ ಪಡೆಯಿತು. ನಾಲ್ಕನೇ ಸ್ಥಾನಕ್ಕೆ ಗೌತಮ್ ಫ್ರೆಂಡ್ಸ್ ಮೂರ್ನಾಡು ತಂಡ ತೃಪ್ತಿಪಟ್ಟುಕೊಂಡಿತು.

ಪAದ್ಯಾವಳಿಯ ಅಟೇಕರ್ ಪ್ರಶಸ್ತಿಯನ್ನು ದೇಶಪ್ರೇಮಿ ತಂಡದ ಯಹ್ಯಾ, ಬೆಸ್ಟ್ ಆಲ್ ರೌಂಡರ್ ದೇಶಪ್ರೇಮಿ ತಂಡದ ರಜಿತ್,ಉತ್ತಮ ಬ್ಲಾಕರ್ ಡೆಕ್ಕನ್ ತಂಡದ ಶರ್ಫುದ್ದೀನ್, ಬೆಸ್ಟ್ ಸೆಟ್ಟರ್ ಆದಿಲ್ ನಾಪೋಕ್ಲು ಹಾಗೂ ಉತ್ತಮ ಲಿಬರೋ ಪ್ರಶಸ್ತಿಯನ್ನು ಅಮ್ಮಿ ಪಡೆದುಕೊಂಡಿತು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ,ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ನಾಪೋಕ್ಲು, ಪ್ರಮುಖರಾದ ಕೌಶಿಕ್ ಕುಟ್ಟಯ್ಯ, ಬೊಳ್ಳಂಡ ಸರಿ, ಮೊಹಮ್ಮದ್ ಎಡಪಾಲ, ರಶೀದ್ ಕುಪ್ಪೋಡಂಡ, ಅಬ್ದುಲ್ ಮಜೀದ್ ಭಾಗವಹಿಸಿದ್ದರು.

ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಶಾಫಿ ಹುಂಡಿ ಹಾಗೂ ಹನೀಫ್ ನೆರವೇರಿಸಿದರು. ತೀರ್ಪುಗಾರರಾಗಿ ಸಚಿನ್ ಹಾಗೂ ಟಿಲ್ಜೋ ಕಾರ್ಯನಿರ್ವಹಿಸಿದರು.