ಮಡಿಕೇರಿ, ನ. ೨೦: ಕೊಡಗಿನಲ್ಲಿ ಕೇವಲ ಒಂದು ಕಡೆಯಲ್ಲಿ ಮಾತ್ರ ಅನುಷ್ಠಾನ ಸೌಲಭ್ಯ ಇದ್ದರೂ ದಂತಭಾಗ್ಯ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ವರ್ಷ ಇಲ್ಲಿಯ ತನಕ ಒಟ್ಟು ೧೦೭ ಮಂದಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ೭೩ ಮಂದಿ ನೋಂದಾಯಿಸಿಕೊAಡು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.

ದಂತ ಭಾಗ್ಯ ಯೋಜನೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದು, ಸಾಧ್ಯವಿರುವ ಕಡೆಗಳಲೆಲ್ಲಾ ಈ ಬಗ್ಗೆ ಪ್ರಚಾರ ನಡೆಸಲಾಗುತ್ತಿದೆ. ನಿರಂತರ ಜಾಗೃತಿ ಕಾರ್ಯಕ್ರಮಗಳ ನಂತರ ದಂತಭಾಗ್ಯ ಯೋಜನೆಯ ಲಾಭ ಪಡೆದು ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೂಲಕ ಬೊಚ್ಚುಬಾಯಿಯ ಹಿರಿಯರ ನಗುವಿಗೆ ಫಳ ಫಳ ಹೊಳೆಯುವ ಹಲ್ಲಿನ ಸೆಟ್ ಉಚಿತವಾಗಿ ಕೊಟ್ಟು ಆ ಮೂಲಕ ಅವರ ಹಿರಿತನದ ಕಳೆ ಹೆಚ್ಚಿಸಲು ಯೋಜನೆ ರೂಪಿಸಿದ ಸರಕಾರದ ಆಶಯಕ್ಕೆ ಬಲ ಬಂದAತಾಗಿದೆ.

ಯೋಜನೆಯ ಫಲಾನುಭವಿ ಯಾಗಿ ಆಯ್ಕೆ ಆದವರು ರಾಜ್ಯ ಸರಕಾರ ಶಿಫಾರಸ್ಸು ಮಾಡಿರುವ ಖಾಸಗಿ ದಂತ ಮಹಾವಿದ್ಯಾಲಯ ಗಳಲ್ಲಿ ಪ್ರಯೋಜನ ಪಡೆದು ಕೊಳ್ಳಬಹುದಾಗಿದೆ. ಕೊಡಗಿನಲ್ಲಿ ವೀರಾಜಪೇಟೆಯಲ್ಲಿರುವ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ವನ್ನು ಗುರುತಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ದಂತ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡು ಅಳವಡಿಸಬೇಕಾದ ಹಲ್ಲುಗಳ ಸಂಖ್ಯೆ ಅಥವಾ ಸಂಪೂರ್ಣ ಹಲ್ಲು ಸೆಟ್

(ಮೊದಲ ಪುಟದಿಂದ) ಬೇಕಾಗಿರುವ ಬಗ್ಗೆ ಶಿಫಾರಸ್ಸು ಪತ್ರ ಬರೆಸಿಕೊಂಡ ನಂತರ ಇಲ್ಲಿಗೆ ಬಂದು ಯೋಜನೆಯ ಫಲಾನುಭವಿ ಆಗಬಹುದು.

ಯೋಜನೆಯ ಫಲಾನುಭವಿಗಳನ್ನು ಗುರುತಿಸುವಲ್ಲಿ ಮೊದಲ ಹಂತದಲ್ಲಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರ ಪಾತ್ರವೂ ಮಹತ್ವದ್ದಾಗಿದೆ. ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಹಲ್ಲಿಲ್ಲದ ಹಿರಿಯರನ್ನು ಆಶಾ ಕಾರ್ಯಕರ್ತೆಯರು ಹುಡುಕಿ ಪಟ್ಟಿ ಮಾಡಬೇಕು. ಅವರಿಗೆ ಸರ್ಕಾರದ ಈ ಯೋಜನೆ ಬಗ್ಗೆ ಮಾಹಿತಿ ನೀಡಿ ಮನವೊಲಿಸಿ ಸರಕಾರಿ ಆಸ್ಪತ್ರೆಗೆ ಕರೆ ತಂದು ಪರೀಕ್ಷೆ ಮಾಡಿಸಬೇಕು. ನಂತರ ವೈದ್ಯರ ಶಿಫಾರಸ್ಸು ಪತ್ರದೊಂದಿಗೆ ದಂತ ಮಹಾವಿದ್ಯಾಲಯಕ್ಕೆ ತೆರಳುವಂತೆ ಅವರಿಗೆ ಸಲಹೆ ಕೊಡಬೇಕಾಗಿರುತ್ತದೆ.

ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಯಾದ ‘ಭಾಗ್ಯ’ ಸರಣಿಯ ಹಲವು ಯೋಜನೆಗಳಲ್ಲಿ ‘ದಂತ ಭಾಗ್ಯ’ವೂ ಒಂದು. ೨೦೧೫ ಡಿ. ೬ ರಿಂದ ಈ ಯೋಜನೆ ಅನುಷ್ಠಾನದಲ್ಲಿದೆ. ಮೂರು ಅಥವಾ ಅದಕ್ಕಿಂತಲೂ ಜಾಸ್ತಿ ಹಲ್ಲುಗಳನ್ನು ಕಳೆದುಕೊಂಡಿರುವ ೪೫ ವರ್ಷಕ್ಕೂ ಮೇಲ್ಪಟ್ಟವರು ದಂತ ಭಾಗ್ಯ ಯೋಜನೆಯ ಫಲಾನುಭವಿ ಆಗಬಹುದು.

ಖಾಸಗಿ ದಂತ ಚಿಕಿತ್ಸಾಲಯಗಳಲ್ಲಿ ಹಲ್ಲು ಸೆಟ್ ಅಳವಡಿಕೆಗೆ ಅಂದಾಜು ೧೦-೧೫ ಸಾವಿರ ರೂ. ಆಗುತ್ತದೆ. ಆದರೆ ದಂತ ಭಾಗ್ಯ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಕೊಡಗು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಂತ ಪ್ರಯೋಗಾಲಯವಿದ್ದು, ಇಲ್ಲಿಯೂ ದಂತಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದೆ. ಆದರೆ ಪ್ರಯೋಗಾಲಯ ತಂತ್ರಜ್ಞರ ಹುದ್ದೆ ಖಾಲಿ ಇರುವುದರಿಂದ ಪ್ರಯೋಗಾಲಯದ ಪ್ರಯೋಜನ ಜಿಲ್ಲೆಗೆ ಆಗುತ್ತಿಲ್ಲ.

-ಸುನಿಲ್ ಪೊನ್ನೇಟಿ