ವರದಿ: ಚಂದ್ರಮೋಹನ್
ಕುಶಾಲನಗರ, ನ. ೨೦: ಕೊಡಗು ಜಿಲ್ಲೆಯಲ್ಲಿ ಹಲವೆಡೆ ಅರಣ್ಯ ಇಲಾಖೆಯ ಪ್ರಸ್ತಾಪಿತ ಆನೆ ಕಾರಿಡಾರ್ ಯೋಜನೆ ಕುರಿತು ರೈತರಿಗೆ ಹಲವು ಆತಂಕಗಳು ಮೂಡತೊಡಗಿವೆ. ಆನೆ-ಮಾನವ ಸಂಘರ್ಷ, ಹುಲಿ ಹಾವಳಿ, ಕಾಡುಪ್ರಾಣಿಗಳ ಕಿರುಕುಳವನ್ನು ತಪ್ಪಿಸಲು ಅರಣ್ಯದ ಅಂಚಿನ ಅರಣ್ಯ ಮತ್ತು ರೈತರ ಜಮೀನುಗಳ ಮೇಲೆ ಅರಣ್ಯ ಇಲಾಖೆ ಆನೆ ಕಾರಿಡಾರ್ ರೂಪಿಸಲು ಹೊರಟಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಕುಶಾಲನಗರ ಸಮೀಪದ ಆನೆಕಾಡು, ಆನೆ ಕಾರಿಡಾರ್ ಯೋಜನೆಯಿಂದ ಆಸ್ತಿ-ಪಾಸ್ತಿ ಕಳೆದುಕೊಳ್ಳುವ ೨೫ಕ್ಕೂ ಅಧಿಕ ಕುಟುಂಬ ಸದಸ್ಯರು ಪ್ರತಿಭಟನೆಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿರುವುದು ಕಂಡುಬAದಿದೆ.
ಕಳೆದ ಹಲವು ವರ್ಷಗಳಿಂದ ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟು ಕೃಷಿ ಚಟುವಟಿಕೆಗಳಿಗೆ ಮತ್ತು ಮಾನವ ಹಾನಿಯಲ್ಲಿ ತೊಡಗಿರುವ ವನ್ಯಜೀವಿಗಳ ಮೂಲ ದಾರಿಗಳನ್ನು ಮತ್ತೆ ಮರು ಸೃಷ್ಟಿ ಮಾಡಲು ಹೊರಟಿರುವ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಈ ಯೋಜನೆ ರೈತಾಪಿ ವರ್ಗದ ನೆಮ್ಮದಿ ಕೆಡಿಸುವಂತೆ ಮಾಡುತ್ತಿದೆ ಎನ್ನುವುದು ಈ ಭಾಗದ ಹಲವರ ಆತಂಕದ ನುಡಿಯಾಗಿದೆ.
ಆನೆ ಮಾನವ ಸಂಘರ್ಷ, ಹುಲಿ ಹಾವಳಿ, ಮತ್ತಿತರ ವನ್ಯಜೀವಿಗಳಿಂದ ತಮ್ಮ ಬೆಳೆ ಮತ್ತು ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ರೈತರಿಗೆ ಬವಣೆಯಾಗಿದೆ. ಈ ಸಮಸ್ಯೆಗೆ
(ಮೊದಲ ಪುಟದಿಂದ) ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ನಿರಂತರ ಚರ್ಚೆ ನಡೆಸಿದರೂ, ಯಾವುದೇ ರೀತಿಯ ಫಲ ದೊರೆಯಲು ಸಾಧ್ಯವಾಗಿಲ್ಲ.
ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ರೂಪಿಸುವ ಯೋಜನೆಯ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಹಲವು ಹಂತಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಅರಣ್ಯ ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಸರ್ವೆ ಕಾರ್ಯವು ಮುಗಿದಿವೆ. ಅರಣ್ಯ ಇಲಾಖೆ ಮೂಲಕ ಸ್ಥಳ ನಿಗದಿ ಮಾಡುವ ಕಾರ್ಯ ನಡೆದಿದ್ದು, ವನ್ಯಜೀವಿ ವಿಭಾಗ ಯೋಜನೆಯನ್ನು ಕಾರ್ಯಗತ ಗೊಳಿಸುವುದಾಗಿ ತಿಳಿದುಬಂದಿದೆ.
ರಸೂಲ್ಪರ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು ೨೫೦ ಮೀ. ಅಗಲ, ೧ ಕಿ.ಮೀ ಉದ್ದದ ಕಾರಿಡಾರ್ ರೂಪಿಸಲು ಇಲಾಖೆ ಸರ್ವೆ ಕಾರ್ಯ ನಡೆಸಿದೆ. ಈ ಯೋಜನೆ ಹಲವು ದಶಕಗಳ ಹಿಂದೆಯೆ ರೂಪು ಗೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಆನೆ ಮಾನವ ಹತ್ಯೆ ಘಟನೆಗಳು ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಗೆ ಮರುಜೀವ ಬಂದಿರುವುದಾಗಿ ಅರಣ್ಯ ಅಧಿಕಾರಿ ಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ತಾಲೂಕು ವ್ಯಾಪ್ತಿಯ ಯಡವನಾಡು, ಅತ್ತೂರು ಮತ್ತಿತರ ಪ್ರದೇಶಗಳ ಆನೆ ಮಾರ್ಗಗಳಲ್ಲಿ ಕಾರಿಡಾರ್ ರೂಪಿಸಲು ಈ ಹಿಂದೆಯೆ ಪ್ರಸ್ತಾವನೆಯಾಗಿತ್ತು ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ಕೆ.ವಿ ಶಿವರಾಂ ‘ಶಕ್ತಿ’ಗೆ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮೀಸಲು ಅರಣ್ಯದಿಂದ ಕಾವೇರಿ ನದಿ ದಾಟಿ ಜಿಲ್ಲೆಯ ಗಡಿ ಮೂಲಕ ಅತ್ತೂರು, ಆನೆಕಾಡು ಮೀಸಲು ಅರಣ್ಯಕ್ಕೆ ಬರುವ ಆನೆಗಳಿಗೆ ಈ ಕಾರಿಡಾರ್ ಯೋಜನೆ ರೂಪಿತಗೊಳ್ಳುತ್ತಿದೆ. ಎರಡು ಜಿಲ್ಲೆಗಳ ಅರಣ್ಯದಲ್ಲಿ ನೂರಕ್ಕೂ ಅಧಿಕ ಕಾಡಾನೆಗಳು ನೆಲೆ ಕಂಡಿದ್ದು, ಇದರೊಂದಿಗೆ ಇತರೆ ವನ್ಯಜೀವಿಗಳು ಕೂಡ ಆಹಾರ ಅರಸಿಕೊಂಡು ಬರುತ್ತಿರುವುದು ಸಾಮಾನ್ಯ ವಿಷಯ. ಈ ಸಂದರ್ಭ ಸುತ್ತಮುತ್ತ ವ್ಯಾಪ್ತಿಯ ಕೃಷಿ ಚಟುವಟಿಕೆಗಳು ಹಾನಿ ಆಗುವುದರೊಂದಿಗೆ ಮಾನವ ಮತ್ತು ಪ್ರಾಣಿಗಳ ಹತ್ಯೆ ಆಗುತ್ತಿರುವುದು ನಿರಂತರ ಬೆಳವಣಿಗೆಯಾಗಿದೆ.
ಈ ಎಲ್ಲಾ ಬೆಳವಣಿಗೆ ನಡುವೆ ಈ ಭಾಗದ ರೈತರು, ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದು, ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅರಣ್ಯದ ನಿಯಮಗಳು ಬಿಗಿಯಾಗಿ ರೈತರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎನ್ನುವುದು, ಈ ಭಾಗದ ಜನರ ಅಭಿಪ್ರಾಯವಾಗಿದೆ. ಇದರೊಂದಿಗೆ ಹೆಚ್ಚಿನ ಸಂಖ್ಯೆಯ ವನ್ಯಜೀವಿಗಳು ಮೈಸೂರು ಭಾಗದಿಂದ ಜಿಲ್ಲೆಯ ಅರಣ್ಯಕ್ಕೆ ಪ್ರವೇಶಿಸಿ ಪ್ರಾಣಿಗಳ ತೊಂದರೆ ಹೆಚ್ಚಾಗಬಹುದು ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡ ರಸೂಲ್ಪುರ ಗ್ರಾಮದ ೨೫ ಕ್ಕೂ ಅಧಿಕ ಕುಟುಂಬ ಸದಸ್ಯರು ಈ ಯೋಜನೆಯಿಂದ ತಮ್ಮ ಬದುಕು ನಾಶವಾಗಲಿದೆ ಎಂಬ ಆತಂಕಲ್ಲಿದ್ದಾರೆ.
ಮಾಜಿ ಸೈನಿಕರ ಕುಟುಂಬಗಳು ಮತ್ತು ಬಡ ಕುಟುಂಬಗಳ ಜಮೀನು ಯೋಜನೆಗೆ ಒಳಪಡುವ ಹಿನ್ನೆಲೆಯಲ್ಲಿ ಮುಂದಿನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಜಮೀನು ಕಳೆದುಕೊಂಡಲ್ಲಿ ಪರ್ಯಾಯ ವ್ಯವಸ್ಥೆ ಮೂಲಕ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಕೃಷಿಕ ರಾಮಚಂದ್ರ ಅವರ ಅಭಿಪ್ರಾಯವಾಗಿದೆ. ಮಾಜಿ ಸೈನಿಕರಾದ ಉಳುವಾರನ ಅಪ್ಪಯ್ಯ ಹಾಗೂ ಪೊನ್ನಪ್ಪ, ಮುತ್ತಪ್ಪ ಕುಟುಂಬ ಸದಸ್ಯರಿಗೆ ನೀಡಿದ ಕೃಷಿ ಭೂಮಿಗೂ ಈ ಯೋಜನೆಯಿಂದ ಕುತ್ತು ಬರುವಂತಾಗಿದೆ.
ರೈತರೊAದಿಗೆ ಈಗಾಗಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿ ವನ್ಯಜೀವಿ ಮಾನವ ಸಂಘರ್ಷಕ್ಕೆ ಮತ್ತು ಉಂಟಾಗಿರುವ ಗೊಂದಲ ಗಳಿಗೆ ಅಂತ್ಯ ಹಾಡಲು ಪ್ರಯತ್ನ ನಡೆಸಿದ್ದಾರೆ. ಜನರಿಂದ ಅಹವಾಲು ಪಡೆದಿದ್ದು, ಆನೆಗಳ ಮಾರ್ಗ ರಚಿಸಲು ತೊಡಕುಂಟಾಗಿರುವ ಸ್ಥಳಗಳನ್ನು ತೆರವುಗೊಳಿಸಿ, ಆನೆ ಕಾರಿಡಾರ್ ನಿರ್ಮಿಸುವ ಮೂಲಕ ಮಾನವ ವನ್ಯಜೀವಿ ಸಂಘರ್ಷ ತಪ್ಪಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಇತ್ತೀಚಿಗೆ ಈ ಭಾಗಕ್ಕೆ ಭೇಟಿ ನೀಡಿದ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆರ್. ಕೆ ಸಿಂಗ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ಗುಡ್ಡೆಹೊಸೂರು- ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ರಸೂಲ್ಪುರ ಬಸವೇಶ್ವರ ದೇವಾಲಯ ಬಳಿ ಯೋಜನೆ ರೂಪುಗೊಂಡಲ್ಲಿ ಈ ವ್ಯಾಪ್ತಿಯ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
ಒಟ್ಟಾರೆ ಅರಣ್ಯ ಇಲಾಖೆಯಿಂದ ಆನೆ ಕಾರಿಡಾರ್ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯದೆ ಕುಶಾಲನಗರದ ರಸೂಲ್ಪುರ ಸೇರಿದಂತೆ ವಿವಿಧೆಡೆ ರೈತಾಪಿ ವರ್ಗ ಮತ್ತು ಅಲ್ಲಿನ ನಿವಾಸಿಗಳು ಗೊಂದಲದಲ್ಲಿ ಇರುವುದು ಮಾತ್ರ ಖಚಿತಗೊಂಡಿದ್ದು, ಯೋಜನೆಯ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿರುವುದು ಕಂಡು ಬಂದಿದೆ.