ಸೋಮವಾರಪೇಟೆ, ನ. ೧೭: ಕಾಡಾನೆ ಹಾವಳಿ ಸಮಸ್ಯೆ, ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ. ೨೧ ರಂದು ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮಡಿಕೇರಿ ಚಲೋ ಹಾಗೂ ಅರಣ್ಯ ಭವನಕ್ಕೆ ಮುತ್ತಿಗೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಮನೆಯಿಂದ ರೈತರು ಭಾಗವಹಿಸಲಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು.

ಇಲ್ಲಿನ ಸಫಾಲಿ ಸಭಾಂಗಣದಲ್ಲಿ ನಡೆದ ಸೋಮವಾರಪೇಟೆ ತಾಲೂಕು ರೈತ ಸಂಘದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ. ಅರಣ್ಯ ಇಲಾಖೆಯ ಅಸಡ್ಡೆ, ಅವೈಜ್ಞಾನಿಕ ಆಡಳಿತದಿಂದ ಜಿಲ್ಲೆಯ ರೈತರು ಸಮಸ್ಯೆಗಳ ಸುಳಿಗೆ ಸಿಲುಕುವಂತಾಗಿದೆ ಎಂದು ಆರೋಪಿಸಿದರು.

ರೈತ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ. ದಿನೇಶ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ನಿಗದಿತ ಸಮಸಯದಲ್ಲಿ ಮಳೆ ಬೀಳುತ್ತಿಲ್ಲ. ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವಂತೆ ಹೋರಾಟ ನಡೆಸಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಸಭೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸುಜಯ್ ಬೋಪಯ್ಯ, ಪದಾಧಿಕಾರಿಗಳಾದ ಸುಭಾಷ್, ಭುವಿಕುಮಾರ್, ಲಕ್ಷö್ಮಣ್, ಅಜ್ಜಮಾಡ ಚಂಗಪ್ಪ, ಟಿ.ಕೆ. ರಾಜು, ಚಂದ್ರಶೇಖರ್, ಮಂದಣ್ಣ, ಹೂವಯ್ಯ, ರಾಜೇಶ್, ರಾಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.