ಶಾಸಕರ ವಿರುದ್ಧ ಆಕ್ರೋಶ

ಶ್ರೀಮಂಗಲ, ನ. ೧೭: ಮೂಲಭೂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಪ್ರಶ್ನಿಸುವುದು ಪ್ರತಿಯೋರ್ವ ಪ್ರಜೆಯ ಹಕ್ಕಾಗಿದೆ. ಆದರೆ ಕೊಡಗಿನಲ್ಲಿ ಮೂಲಭೂತ ಸಮಸ್ಯೆಗಳಾದ ರಸ್ತೆಯ ಬಗ್ಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಪ್ರಶ್ನಿಸಿದರೆ ನಮ್ಮನ್ನೇ ಅಪರಾಧಿಯಂತೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಮತ್ತು ಕೊಡಗು ಸಂರಕ್ಷಣಾ ವೇದಿಕೆ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ ಆರೋಪಿಸಿದ್ದಾರೆ. ಈ ಬಗ್ಗೆ ಪೊನ್ನಂಪೇಟೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಪೊನ್ನಂಪೇಟೆ- ಕಾನೂರು-ನಿಟ್ಟೂರು ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿ ಮೂರು ವರ್ಷ ಆದರೂ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಟೆಂಡರ್ ಅನ್ನು ರದ್ದುಮಾಡಲು ಬಿಡುತ್ತಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಮಾಧ್ಯಮ ಹೇಳಿಕೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಶಾಸಕರಾಗಿ ಕೆ.ಜಿ. ಬೋಪಯ್ಯ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ರಾಜೀವ್ ಬೋಪಯ್ಯ ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ತಾರಕಕ್ಕೇರಿರುವ ವನ್ಯಪ್ರಾಣಿ ಹಾಗೂ ಮಾನವ ಸಂಘರ್ಷ ಪ್ರತಿನಿತ್ಯ ಕಾಡಾನೆ ಹುಲಿ ದಾಳಿಯಿಂದ ಬೆಳೆ ಹಾಗೂ ಜಾನುವಾರು ಮಾನವ ಜೀವಹಾನಿ ಸಂಭವಿಸುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ, ರಸ್ತೆಗಳು ಗುಂಡಿ ಬಿದ್ದಿವೆ. ಇಂತಹ ದುಸ್ಥಿತಿಯ ರಸ್ತೆಯಲ್ಲಿ ಜನ ಸಂಚರಿಸುತ್ತಿದ್ದು ಶಾಸಕರಿಗೆ ಇದನ್ನು ಗುಂಡಿ ಬೀಳುವ ಮೊದಲೇ ಸರಿಪಡಿಸುವ ವಿವೇಚನೆ ಇಲ್ಲವೇ, ವನ್ಯ ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕೆ ಏಕೆ ಆಸಕ್ತಿ ಇಲ್ಲ ಎಂದು ಪ್ರಶ್ನಿಸಿದ್ದಾರೆ.

ಗೋವುಗಳನ್ನು ಅತ್ಯಂತ ಪ್ರೀತಿಯಲ್ಲಿ ಸಾಕುವ ಜಿಲ್ಲೆಯ ಜನತೆಗೆ ಇಂದು ಹುಲಿ ಹಾವಳಿಯಿಂದ ಗೋವುಗಳ ಸಾಕುವುದನ್ನು ಬಿಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಗೋವು ಸಂತತಿ ಅವನತಿಯಲ್ಲಿದೆ. ವನ್ಯ ಪ್ರಾಣಿಗಳ ಹಾವಳಿಯಿಂದ ಕೊಡಗಿನ ಸಂಸ್ಕೃತಿಯ ಭಾಗವಾದ ಭತ್ತದ ಗದ್ದೆಗಳನ್ನು ಕೃಷಿ ಮಾಡದೆ ಪಾಳು ಬಿಡುವಂತಾಗಿದೆ. ಇದಲ್ಲದೆ ಹುಲಿ ಹಾಗೂ ಕಾಡಾನೆ ದಾಳಿಗೆ ಸಿಲುಕಿ ಜನರು ಹಾಗೂ ಜಾನುವಾರುಗಳು ಸಾವನ್ನಪ್ಪುತ್ತಿದ್ದು, ಈ ಸಮಸ್ಯೆಗೆ ಕಳೆದ ೪ ಅವಧಿಯಿಂದ ಶಾಸಕರು ಯಾವುದೇ ಶಾಶ್ವತ ಪರಿಹಾರ ರೂಪಿಸಿಲ್ಲ ಎಂದು ಟೀಕಿಸಿದ್ದಾರೆ. ಅನೀಶ್ ಮಾದಪ್ಪ ಮಾತನಾಡಿ, ಶಾಸಕರು ಭೂಮಿಪೂಜೆ ಮಾಡಿದ ಹಾಗೂ ಉದ್ಘಾಟನೆ ಮಾಡಿದ ಯಾವುದೇ ರಸ್ತೆಗಳು ಆರು ತಿಂಗಳ ಮೇಲೆ ಬಾಳಿಕೆ ಬರುತ್ತಿಲ್ಲ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು. ಶಾಸಕರ ರಾಜೀನಾಮೆಗೆ ಆಗ್ರಹಿಸಿದರು.