ವೀರಾಜಪೇಟೆ, ನ. ೧೮: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ೮ನೇ ವರ್ಷದ “ಕೊಡವ ನಮ್ಮೆ” ಕಾರ್ಯಕ್ರಮದಲ್ಲಿನ ಕೊಡವ ಸಮಾಜಗಳ ನಡುವಿನ ಹಾಕಿ ಪಂದ್ಯಾವಳಿಯು ರೋಚಕತೆಯಿಂದ ಕೂಡಿತ್ತು.
ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ವೀರಾಜಪೇಟೆ ಹಾಗೂ ಮೂರ್ನಾಡು ತಂಡಗಳ ನಡುವೆ ಮೊದಲ ನಾಕೌಟ್ ಪಂದ್ಯಾವಳಿ ನಡೆದಿದ್ದು, ಎರಡು ತಂಡಗಳು ಯಾವುದೇ ಗೋಲು ಪಡೆಯದ ಕಾರಣ ಟೈ ಬ್ರೇಕರ್ನಲ್ಲಿ ೩-೨ ಗೋಲುಗಳ ಅಂತರದಲ್ಲಿ ಮೂರ್ನಾಡು ತಂಡ ಜಯಗಳಿಸಿ ರೌಂಡ್ ರಾಬಿನ್ ಸುತ್ತು ಪ್ರವೇಶಿಸಿತು.
ಮಡಿಕೇರಿ ಹಾಗೂ ಹುದಿಕೇರಿ ತಂಡಗಳ ನಡುವೆ ನಡೆದ ಮೊದಲ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಹುದಿಕೇರಿ ತಂಡದ ವಿರುದ್ಧ ೨-೧ ಗೋಲಿನ ಅಂತರದಲ್ಲಿ ಮಡಿಕೇರಿ ತಂಡ ಜಯಗಳಿಸಿತು.
ಎರಡನೇ ರೌಂಡ್ ರಾಬಿನ್ ಪಂದ್ಯದಲ್ಲಿ ಶ್ರೀಮಂಗಲ ಹಾಗೂ ಮೂರ್ನಾಡು ತಂಡಗಳ ನಡುವೆ ಪೈಪೋಟಿ ನಡೆದಿದ್ದು, ಎರಡು ತಂಡಗಳು ಯಾವುದೇ ಗೋಲು ದಾಖಲಿಸದ ಕಾರಣ ಎರಡು ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಯಿತು.
ತಾ.೧೯ರಂದು (ಇಂದು) ರೌಂಡ್ ರಾಬಿನ್ ಹಾಕಿ ಪಂದ್ಯಾವಳಿ ಬೆಳಿಗ್ಗೆ ೯ ಗಂಟೆಗೆ ಹುದಿಕೇರಿ- ಮೂರ್ನಾಡು, ೧೦.೩೦ಕ್ಕೆ ಮಡಿಕೇರಿ- ಶ್ರೀಮಂಗಲ, ೨.೩೦ಕ್ಕೆ ಮಡಿಕೇರಿ- ಮೂರ್ನಾಡು, ೩.೩೦ಕ್ಕೆ ಶ್ರೀಮಂಗಲ- ಹುದಿಕೇರಿ ತಂಡಗಳ ನಡುವೆ ನಡೆಯಲಿದೆ.
ಹಗ್ಗಜಗ್ಗಾಟ
ಬೊಳಿಯಂಗಡ ದಾದು ಪೂವಯ್ಯ ಅವರ ನೇತೃತ್ವದಲ್ಲಿ ನಡೆದ ಪುರುಷರು ಮತ್ತು ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ಗಮನ ಸೆಳೆಯಿತು.
ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಏಳು ಕೊಡವ ಸಮಾಜಗಳ ನಡುವೆ ನಡೆದ ಪೈಪೋಟಿಯಲ್ಲಿ ಅಮ್ಮತ್ತಿ ಮತ್ತು ನಾಪೋಕ್ಲು ತಂಡ ಕೊನೆ ಹಂತಕ್ಕೆ ಪ್ರವೇಶಿಸಿವೆ.
ಮಹಿಳೆಯರ ವಿಭಾಗದಲ್ಲಿ ಏಳು ತಂಡಗಳು ಪಾಲ್ಗೊಂಡಿದ್ದು, ಮಡಿಕೇರಿ ಹಾಗೂ ನಾಪೋಕ್ಲು ಕೊಡವ ಸಮಾಜನಗಳ ನಡುವೆ ಅಂತಿಮ ಪಂದ್ಯಾವಳಿ ನಡೆಯಲಿದ್ದು, ತಾ.೨೦ಕ್ಕೆ ಪುರುಷರ ಹಾಗೂ ಮಹಿಳೆಯರ ಅಂತಿಮ ಪಂದ್ಯಾವಳಿ ನಡೆಯಲಿದೆ.
ತೆಂಗಿಗೆ ಗುಂಡು
ಕಬ್ಬಚ್ಚಿರ ಶರತ್ ಅವರ ನೇತೃತ್ವದಲ್ಲಿ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ವಿವಿಧ ಕೊಡವ ಸಮಾಜದ ಅಧ್ಯಕ್ಷರು ಪಾಲ್ಗೊಂಡಿದ್ದರು.
ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಬಡುವಂಡ ಮುತ್ತಪ್ಪ ಪ್ರಥಮ ರೂ.೫ ಸಾವಿರ, ಬಡುವಂಡ ದೇವಯ್ಯ ದ್ವಿತೀಯ ರೂ.೩ ಸಾವಿರ ಹಾಗೂ ಪುತ್ತರಿರ ಕಾರ್ತಿಕ್ ಕಾರ್ಯಪ್ಪ ತೃತೀಯ ರೂ.೨ ಸಾವಿರ ಬಹುಮಾನ ಪಡೆದುಕೊಂಡರು. ಜೊತೆಗೆ ದಾನಿಗಳಾದ ಅಪ್ಪುಮಣಿಯಂಡ ಸನ್ನು ಹಾಗೂ ಡೆಸ್ಸಿ ದಂಪತಿಗಳು ನೀಡಿದ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ತಾ.೧೯ರಂದು (ಇಂದು) ಬೆಳಿಗ್ಗೆ ೧೦.೪೫ಕ್ಕೆ ಬಾಳುಗೋಡುವಿನ ಫೇಡರೇಷನ್ ಆಫ್ ಕೊಡವ ಸಮಾಜದಲ್ಲಿರುವ ಹುತಾತ್ಮ ಚೌಕದಲ್ಲಿ ಯೋಧರಿಗೆ ಗೌರವ ನಮನ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಫೆಡರೇಷನ್ ಆಫ್ ಕೊಡವ ಸಮಾಜಗಳ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ನೇವಲ್ ಕಮಾಂಡರ್ ಚೆಕ್ಕೆರ ಮಿನ್ನು ಬೆಳ್ಯಪ್ಪ, ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಅಯ್ಯಪ್ಪ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತAಡ ಸುಬ್ಬಯ್ಯ ಹಾಗೂ ಹಲವು ನಿವೃತ್ತ ಸೇನಾಧಿಕಾರಿಗಳು, ನಿವೃತ್ತ ಯೋಧರು ಸೇರಿದಂತೆ ಹಲವು ಕೊಡವ ಸಮಾಜದ ಅಧ್ಯಕ್ಷರು, ಸದಸ್ಯರು ಭಾಗವಹಿಸಲಿದ್ದಾರೆ.
ಕೂತಂಡ ಸುರೇಶ್ ಅಪ್ಪಯ್ಯ ನೇತೃತ್ವದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಭಾರದ ಗುಂಡು ಎಸೆತ ಸ್ಪರ್ಧೆ ನಡೆಯಲಿದೆ. -ಈಶಾನ್ವಿ