ಸುಂಟಿಕೊಪ್ಪ, ನ. ೧೭: ಸಮಾಜದ ಏಳಿಗೆಗೆ ಮಹಿಳೆಯರ ಪಾತ್ರ ಮಹತ್ವ ಎಂದು ಹಿರಿಯ ನಾಗರಿಕ ಕರುಂಬಯ್ಯ ಹೇಳಿದರು.
ಹಿಂದೂ ವೇದಿಕೆ ಹಾಗೂ ಹಿಂದೂ ಮಹಿಳಾ ಜಾಗರಣಾ ವೇದಿಕೆಯ ವತಿಯಿಂದ ಸುಂಟಿಕೊಪ್ಪದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರö್ಯಕ್ಕಾಗಿ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಅವರ ಕೊಡುಗೆ ಅಪಾರವಾದುದು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದು ನುಡಿದರು.
ಒನ್ಸ್ಟಾಪ್ ಸಕಿ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪ್ರಭಾವತಿ ಮಾತನಾಡಿ, ಚಿತ್ರದುರ್ಗ ಕಲ್ಲಿನ ಕೋಟೆಯ ವೀರ ಮಹಿಳೆ ಒನಕೆ ಓಬವ್ವ ಅವರು ಹೈದರಾಲಿ ಸೈನಿಕರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದರು. ಮದಕರಿ ನಾಯಕರ ಪ್ರಾಂತ್ಯದಲ್ಲಿ ಹೈದರಾಲಿಯ ಸೈನಿಕರನ್ನು ಒನಕೆ ಓಬವ್ವ ಏಕಾಂಕಿಯಾಗಿ ಹೆದರಿಸಿದ್ದು ಚರಿತ್ರೆಯಲ್ಲಿ ಎಂದೂ ಮರೆಯಲಾಗದೆಂದೂ ಹೇಳಿದರು.
ಮಹಿಳೆಯರ ಸ್ವಾವಲಂಬನೆಗಾಗಿ ಸರಕಾರವು ಹತ್ತು ಹಲವು ಯೋಜನೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ತಂದಿದೆ. ಮಹಿಳೆಯರು ಕಚೇರಿಗೆ ಆಗಮಿಸಿ ಕೃಷಿ, ಹೈನುಗಾರಿಕೆ, ವ್ಯಾಪಾರ, ಗುಡಿಕೈಗಾರಿಕೆ ಹಾಗೂ ಇತರ ಯೋಜನೆಗಳಿಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಹೇಳಿದರು.
ಸಮಾರಂಭದ ವೇದಿಕೆಯಲ್ಲಿ ರಮೇಶ್ ಪಿಳ್ಳೆ, ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಸೇವಾ ಪ್ರತಿನಿಧಿ ಚಿತ್ರಾ ಸುರೇಶ್, ಕೊಡಗು ಜಿಲ್ಲಾ ಹಿಂದೂ ಮಹಿಳಾ ಜಾಗರಣಾ ವೇದಿಕೆಯ ಮಹಿಳಾ ಘಟಕದ ಸಹ ಪ್ರಮುಖ್ ಪವಿತ್ರ ರೈ ಸುಂಟಿಕೊಪ್ಪ, ಮಹಿಳಾ ಕಾರ್ಯಕರ್ತರು ಇದ್ದರು.