ಮುಳ್ಳೂರು, ನ. ೧೪: ಜನಜಾಗೃತಿಯಿಂದ ಸಾಕುನಾಯಿ, ಬೆಕ್ಕು ಸೇರಿದಂತೆ ಸಾಕುಪ್ರಾಣಿಗಳಿಗೆ ಬರುವ ರೇಬಿಸ್ ಕಾಯಿಲೆಯನ್ನು ನಿಯಂತ್ರಣಗೊಳಿಸಲು ಸಾಧ್ಯವಾಗುತ್ತದೆ ಎಂದು ಸೋಮವಾರಪೇಟೆ ತಾಲೂಕು ಪಶು ವೈದ್ಯ ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಸ್.ವಿ. ಬದಾಮಿ ಹೇಳಿದರು.
ಶನಿವಾರಸಂತೆ ರೋಟರಿ ಕ್ಲಬ್, ಪಶು ಸಂಗೋಪನೆ ಇಲಾಖೆ ಮತ್ತು ಹಂಡ್ಲಿ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ೬ನೇ ವರ್ಷದ ಸಾಕುನಾಯಿ ಹಾಗೂ ಬೆಕ್ಕುಗಳಿಗೆ ರೇಬಿಸ್ ನಿಯಂತ್ರಣ ಲಸಿಕಾ ಶಿಬಿರದಲ್ಲಿ ಮಾತನಾಡಿದರು. ರೇಬಿಸ್ ಎಂಬ ವೈರಸ್ ಮೊದಲು ಕಾಡುಪ್ರಾಣಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ನರಿ, ತೋಳ, ಬಾವಲಿ ಮುಂತಾದ ಕಾಡುಪ್ರಾಣಿಗಳು ಸಾಕುನಾಯಿ ಬೆಕ್ಕುಗಳಿಗೆ ಕಡಿದ ಸಂದರ್ಭದಲ್ಲಿ ರೇಬಿಸ್ ವೈರಸ್ ಸಾಕುಪ್ರಾಣಿಗಳಿಗೆ ಹರಡುತ್ತದೆ ರೇಬಿಸ್ ಭಯಾನಕ ಖಾಯಿಲೆಯಾಗಿದ್ದರೂ ಮುಂಜಾಗ್ರತೆಯಾಗಿ ಪ್ರತಿಯೊಬ್ಬರು ಸಾಕುನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದರಿಂದ ರೇಬಿಸ್ ಕಾಯಿಲೆಯನ್ನು ನಿಯಂತ್ರಣ ಗೊಳಿಸಬಹುದು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ. ಜಯಕುಮಾರ್ ಮಾತನಾಡಿ, ರೇಬಿಸ್ ಕಾಯಿಲೆ ಬಗ್ಗೆ ಶ್ವಾನಪ್ರಿಯರಿಗೆ ಅರಿವು ಮೂಡಿಸುವ ಉದ್ದೇಶದಿಂದ ರೋಟರಿ ಸಂಸ್ಥೆಯು ಕಳೆದ ೫ ವರ್ಷಗಳಿಂದ ಉಚಿತ ರೇಬಿಸ್ ನಿಯಂತ್ರಣ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಗೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಸೇವೆ ದೊಡ್ಡದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪಶು ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ. ನಾಗರಾಜ್, ಶನಿವಾರಸಂತೆ ಪಶು ವೈದ್ಯಾಧಿಕಾರಿ ಡಾ. ಸತೀಶ್, ರೋಟರಿ ಕ್ಲಬ್ ವಲಯ ಸೇನಾನಿ ಎಚ್.ವಿ. ದಿವಾಕರ್, ರೋಟರಿ ಕ್ಲಬ್ ಕಾರ್ಯದರ್ಶಿ ಎ.ಡಿ. ಮೋಹನ್ಕುಮಾರ್ ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಶಿಬಿರದಲ್ಲಿ ನೂರಾರು ಶ್ವಾನಗಳಿಗೆ ಉಚಿತ ರೇಬಿಸ್ ನಿಯಂತ್ರಣ ಲಸಿಕೆ ನೀಡಲಾಯಿತು.