ವೀರಾಜಪೇಟೆ, ನ. ೧೪: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಕೋಟುಪರಂಬುವಿನ ವ್ಯಕ್ತಿಯೊಬ್ಬರ ಮೃತದೇಹ ಮೈಸೂರು ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಕಾಕೋಟುಪರಂಬು ಗ್ರಾಮದ ನಿವಾಸಿ ಮೇವಡ ಪ್ರಕಾಶ್(೫೧) ಎಂಬವರೆ ಸಾವನ್ನಪ್ಪಿರುವ ವ್ಯಕ್ತಿ. ಇವರು ನಾಪತ್ತೆಯಾಗಿರುವ ಬಗ್ಗೆ ನ.೧೧ ರಂದು ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ನಡುವೆ ಮೈಸೂರು ರೈಲ್ವೆ ನಿಲ್ದಾಣ ಮತ್ತು ಎಂಎನ್ಜಿಟಿ ನಿಲ್ದಾಣದ ನಡುವೆ ನ.೧೨ ರಂದು ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ವ್ಯಕ್ತಿಯ ಗುರುತು ಪತ್ತೆಗೆ ಅಲ್ಲಿನ ಪೊಲೀಸ್ ಠಾಣೆ ಪ್ರಕಟಣೆ ಹೊರಡಿಸಿತ್ತು. ಇದರ ಆಧಾರದಲ್ಲಿ ರೈಲ್ವೆ ಗಾಡಿಗೆ ಸಿಲುಕಿ ಮೃತಪಟ್ಟ ವ್ಯಕ್ತಿ ಕಾಕೋಟುಪರಂಬು ಗ್ರಾಮದ ಪ್ರಕಾಶ್ ಎಂದು ಗುರುತಿಸಲಾಗಿದೆ. ವೀರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.