ಕುಶಾಲನಗರ, ನ. ೧೪: ಬರಹಗಳು ಬರಹಗಾರರ ಅನುಭವದಲ್ಲಿ ಮೂಡಿಬರಬೇಕು. ಹಾಗಿದ್ದಲ್ಲಿ ಆ ಬರಹಗಳು ಸಮಾಜದ ಅಂಕು ಡೊಂಕುಗಳನ್ನು ಹೊತ್ತು ನಿಂತ ಮೇರು ಕಾವ್ಯವಾಗುತ್ತದೆ ಎಂದು ಕುಶಾಲನಗರದ ಅನುಗ್ರಹ ಪಿಯು ಕಾಲೇಜಿನ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಹೇಳಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ದೇವರಾಜು ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಜಯಂತಿಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ದಾಸ ಸಾಹಿತ್ಯ ಹಾಗೂ ವಚನ ಇಡೀ ಕನ್ನಡ ಸಾಹಿತ್ಯಕ್ಕೆ ತಾಯಿ ಇದ್ದಂತೆ. ಹಳಗನ್ನಡ ಸಾಹಿತ್ಯದ ಪಂಪ- ರನ್ನ ಮೊದಲಾದವರಿಂದ ಹೊಸ ಗನ್ನಡದ ಇಂದಿನ ಆಧುನಿಕ ಕವಿಗಳವರೆಗೂ ಈ ಸಾಹಿತ್ಯ ಪ್ರಕಾರಗಳು ಪ್ರಭಾವ ಬೀರಿವೆ. ಹಳಗನ್ನಡದ ಬರಹಗಳು ಸಂಸ್ಕೃತದಲ್ಲಿದ್ದ ಕಾರಣ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಕೀರ್ತನೆಗಳು ಹಾಗೂ ವಚನಗಳು ಬರೆಯಲ್ಪಟ್ಟಿವೆ.

ಆ ನಿಟ್ಟಿನಲ್ಲಿ ಅಂದು ಸಮಾಜದಲ್ಲಿದ್ದ ಅಸಮಾನತೆಗಳನ್ನು ಬರೆದ ಸಾಹಿತ್ಯ ಜನಮಾನಸದಲ್ಲಿ ಇಂದಿಗೂ ಗಟ್ಟಿಯಾಗಿ ಉಳಿದಿದೆ. ತಮ್ಮದೇ ಆದ ಕೀರ್ತನೆಗಳ ಮೂಲಕ ಸಾಹಿತ್ಯಕ್ಕೆ ಕೊಡುಗೆ ನೀಡಿದ ಪುರಂದರ ಹಾಗು ಕನಕದಾಸರು ನಾಡು ಕಂಡ ಸರ್ವಶ್ರೇಷ್ಠ ದಾರ್ಶನಿಕರು ಎಂದು ಲೀಲಾಕುಮಾರಿ ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಹದಿನೈದನೇ ಶತಮಾನದ ಕಾಲಘಟ್ಟದಲ್ಲಿ ಅಂದಿನ ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆ, ಮೇಲು ಕೀಳು ಪ್ರವೃತ್ತಿ ಹಾಗೂ ಜಾತಿ ವ್ಯವಸ್ಥೆಗಳ ವಿರುದ್ಧ ತಮ್ಮದೇ ಆದ ದಾಟಿಯಲ್ಲಿ ಕೀರ್ತನೆಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದ ಮಹಾಪುರುಷ ಕನಕದಾಸರು ಎಂದು ಶಶಿಧರ್ ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಆರ್. ಮಂಜುಳ ಮತ್ತೋರ್ವ ಅತಿಥಿ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಜಿ. ಮನು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಮೂಡಿಸಲು ಸಂತರು, ಶರಣರು, ದಾಸರು ಹಾಗೂ ನಾಡಿನ ಶ್ರೇಷ್ಠ ದಾರ್ಶನಿಕರ ಹೆಸರಿನಲ್ಲಿ ಪರಿಷತ್ತು ವಿನೂತನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ವಸತಿ ನಿಲಯದ ಮೇಲ್ವಿಚಾರಕಿ ಎನ್.ಸಿ.ಗಾಯಿತ್ರಿ, ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಕೆ.ವಿ. ಉಮೇಶ್, ನಿರ್ದೇಶಕರಾದ ಎಂ.ಎನ್. ಕಾಳಪ್ಪ, ವನಿತಾ ಕಾಳಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಇದ್ದರು. ವಿದ್ಯಾರ್ಥಿನಿ ದಿವ್ಯ ಸ್ವಾಗತಿಸಿ, ಪೃಥ್ವಿ ಪ್ರಾರ್ಥಿಸಿ, ಸುಶ್ಮ ಕನಕದಾಸರ ಕುರಿತು ಮಾತನಾಡಿದರು.